ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಬಹುನಿರೀಕ್ಷಿತ 2025-26ನೇ ಸಾಲಿನ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಮೂಲ ಹಂತದ ಸಮೀಕ್ಷಾ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ರಾಜ್ಯದಲ್ಲಿ ಪ್ರಸ್ತುತ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಹಾಗೂ ಅವರ ಹಕ್ಕುಗಳ ರಕ್ಷಣೆಗಾಗಿ ಇರುವ ಕಾರ್ಯಕ್ರಮಗಳು, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿಗಾಗಿ ಮಾಡಬೇಕಿರುವ ಕೆಲಸಗಳ ಕುರಿತು ಶಿಫಾರಸ್ಸುಗಳು ಸಮೀಕ್ಷಾ ವರದಿಯಲ್ಲಿವೆ.
ವಸತಿ ನಿಲಯಗಳಲ್ಲಿ ಆದ್ಯತೆಯ ಮೇರೆಗೆ ಲಿಂಗತ್ವ ಅಲ್ಪಸಂಖ್ಯಾತರನ್ನು ದಾಖಲಾತಿ ಮಾಡಿಕೊಳ್ಳಲು ಕ್ರಮವಹಿಸುವುದು, ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಯೋಜನೆ ರೂಪಿಸುವುದು, ಲಿಂಗತ್ವ ಅಲ್ಪಸಂಖ್ಯಾತರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಕೋಚಿಂಗ್ ನೀಡುವುದು, ಆರೋಗ್ಯ, ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ, ವಸತಿ ಮತ್ತು ಮೂಲಭೂತ ಸೌಕರ್ಯ, ಲಿಂಗತ್ವ ಅಲ್ಪಸಂಖ್ಯೆತರ ಕ್ಷೇಮಾಭಿವೃದ್ದಿ ಬೋರ್ಡ್ ಸ್ಥಾಪಿಸುವುದು, ಸಾಮಾಜಿಕ ವಿಷಯಗಳಿಗೆ ಹಾಗೂ ಹಾಲಿ ಇರುವ ಸರ್ಕಾರಿ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಲಿಂಗತ್ವ ಅಲ್ಪಸಂಖ್ಯಾತರಿಗೆ (ಟ್ರಾನ್ಸ್ ಜೆಂಡರ್) ವಿಸ್ತರಿಸಲು ಸಮೀಕ್ಷಾ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ಮೂಲಹಂತದ ಸಮೀಕ್ಷೆಯ ಉದ್ದೇಶ:
1. ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಎಲ್ಲಾ ಪ್ರವರ್ಗಗಳು ಎದುರಿಸುವ ಸಮಸ್ಯೆಗಳಾದ ಭಯ, ಅವಮಾನ, ಲಿಂಗ ತಾರತಮ್ಯತೆ, ಸಾಮಾಜಿಕ ತಾರತಮ್ಯ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿ ಇದರಿಂದ ಇವರನ್ನು ಹೊರತರಲು, ಲಿಂಗತ್ವ ಅಲ್ಪಸಂಖ್ಯಾತರು ಕಿರುಕುಳಕ್ಕೆ ಒಳಗಾಗಿದ್ದು ಸಮಾಜದಿಂದ ದೂರ ಉಳಿದಿದ್ದು, ಸಮಾಜದಲ್ಲಿ ಇವರಿಗೆ ನೆಲೆ ಕಲ್ಪಿಸುವುದು ಮೂಲ ಉದ್ದೇಶವಾಗಿದೆ.
2. ಲಿಂಗತ್ವ ಅಲ್ಪಸಂಖ್ಯಾತರನ್ನು (ಟ್ರಾನ್ಸ್ ಜೆಂಡರ್) ಮುಖ್ಯವಾಹಿನಿಗೆ ತರಲು ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಮೂಲಹಂತದ ಸಮೀಕ್ಷೆಯನ್ನು ಕೈಗೊಳ್ಳಬೇಕಾಗಿದೆ.
3. ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿಯನ್ನು ಒದಗಿಸಲು ಈ ಸಮುದಾಯದ ಜನಸಂಖ್ಯೆ, ಶೈಕ್ಷಣಿಕ ಮಟ್ಟದ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಮಾಹಿತಿಯು ಅಗತ್ಯವಾಗಿದೆ.
4. ಮಾಹಿತಿ ಕೊರತೆಯು ಸಾಮಾಜಿಕ ನ್ಯಾಯ ಸ್ಥಾಪನೆ ಹಾಗೂ ಸಬಲೀಕರಣಕ್ಕೆ ಅಡ್ಡಿಯಾಗಿರುತ್ತದೆ. ಏಕೆಂದರೆ ಈ ಸಮುದಾಯದ ಅಭ್ಯುದಯಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಹಾಗೂ ಅನುಷ್ಠಾನಗೊಳಿಸಲು ಮೂಲ ದತ್ತಾಂಶ ಅವಶ್ಯಕವಿದೆ.
5. ಟ್ರಾನ್ಸ್ ಜೆಂಡರ್ ರವರ ವಿರುದ್ದ ದೌರ್ಜನ್ಯಗಳನ್ನು ತಡೆಗಟ್ಟಲು ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಸೂಕ್ತ ಕ್ರಮವಹಿಸುವುದು.
6. ಸರ್ಕಾರದಲ್ಲಿನ ಎಲ್ಲಾ ಇಲಾಖೆಗಳ ಯೋಜನೆಗಳಲ್ಲಿ ಈ ವರ್ಗದವರ ಕಲ್ಯಾಣಕ್ಕೆ ಮೂಲ ದತ್ತಾಂಶ ಅವಶ್ಯವಿದೆ ಹಾಗೂ ಲಿಂಗತ್ವ ಅಲ್ಪಸಂಖ್ಯೆತರ ಕ್ಷೇಮಾಭಿವೃದ್ದಿ ಬೋರ್ಡ್ ಸ್ಥಾಪಿಸುವುದು, ಅನ್ನು ಸ್ಥಾಪಿಸುವುದು.
ಸಚಿವರ ಅಧ್ಯಕ್ಷತೆಯಲ್ಲಿ ಸಭೆ:
· ಲಿಂಗತ್ವ ಅಲ್ಪಸಂಖ್ಯಾತರ ಬೇಸ್ ಲೈನ್ (ಮೂಲಹಂತದ) ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಮಾಡುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರದ ಕಾರ್ಯದರ್ಶಿಗಳ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯ ಆಧಾರಿತ ಸಂಖ್ಯೆಗಳ ಮುಖ್ಯಸ್ಥರೊಂದಿಗೆ ಸಭೆಗಳನ್ನು ನಡೆಸಲಾಗಿತ್ತು.
· ಸಮೀಕ್ಷೆಯ ಕಾರ್ಯವು 45 ಕೆಲಸದ ದಿನಗಳು ಒಳಗೊಂಡಿರಬೇಕೆಂದು ನಿರ್ಣಯಿಸಲಾಗಿತ್ತು.
· ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ ಸಮೀಕ್ಷೆಯ Karmani Survey web application ಮೊಬೈಲ್ ಒನ್, ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ (EDCS) ಇವರಿಂದ ಸಿದ್ದಪಡಿಸುವುದರ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.
ತರಬೇತಿ ಕಾರ್ಯಾಗಾರ:
· 31 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆಧಾರಿತ ಸಂಸ್ಥೆಗಳಿಂದ ಗುರುತಿಸಿರುವ ಪ್ರತಿನಿಧಿಗಳಿಗೆ, ಮಾಸ್ಟರ್ ಟ್ರೈನರ್ಸ್ ಮತ್ತು ಸಮೀಕ್ಷಾದಾರರಿಗೆ ಸಮೀಕ್ಷೆಯ ಕುರಿತಂತೆ ತರಬೇತಿದಾರರ ತರಬೇತಿಯನ್ನು ಹಂತ ಹಂತವಾಗಿ ನೀಡಲಾಗಿತ್ತು. ಸಮುದಾಯಧಾರಿತ ಸಂಸ್ಥೆಗಳಿಂದ ಗುರುತಿಸಿರುವ ಉಸ್ತುವಾರಿ, ಮಾಸ್ಟರ್ ಟ್ರೈನರ್ಸ್, ಸಮೀಕ್ಷಾದಾರರಿಗೆ ಸಮೀಕ್ಷೆಯನ್ನು ಪ್ರಾರಂಭಿಸಲು ಸಮೀಕ್ಷೆದಾರರನ್ನು ಗುರುತಿಸಲಾಯಿತು.
ಸ್ಥಿತಿಗತಿಗಳ ಬಗ್ಗೆ ವಿಶ್ಲೇಷಣಾ ವರದಿ
· 2025-26ನೇ ಸಾಲಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ (ಟ್ರಾನ್ಸ್ ಜೆಂಡರ್) ಸ್ಥಿತಿಗತಿಗಳನ್ನು ಅರಿಯಲು 31 ಜಿಲ್ಲೆಗಳಲ್ಲಿ 15ನೇ ಸೆಪ್ಟೆಂಬರ್ 2025 ರಿಂದ ಸಮೀಕ್ಷೆಯನ್ನು ನಡೆಸಿದ್ದು, ಸಮೀಕ್ಷೆಯಿಂದ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 10250 ಜನ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ 18 ವರ್ಷದೊಳಗಿನ 115 ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳು ಒಟ್ಟು 10365 ಲಿಂಗತ್ವ ಅಲ್ಪಸಂಖ್ಯಾತರು ಇರುವುದು ತಿಳಿದು ಬಂದಿದೆ.
· ಅತೀ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರನ್ನು ಹೊಂದಿರುವ ಮೊದಲ 05 ಜಿಲ್ಲೆಗಳಲ್ಲಿ ವಿಜಯಪುರು ಜಿಲ್ಲೆಯಲ್ಲಿ 1428, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1252, ಬೆಂಗಳೂರು ನಗರ ಜಿಲ್ಲೆಯಲ್ಲಿ 757, ಕೋಲಾರ ಜಿಲ್ಲೆಯಲ್ಲಿ 638 ಮತ್ತು ಬೆಳಗಾವಿ ಜಿಲ್ಲೆಯಲ್ಲಿ 618 ಜನರು ಇರುವುದು ತಿಳಿದು ಬಂದಿದೆ.
· ಸಮೀಕ್ಷೆಯಲ್ಲಿ ಅವರ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ, ಶೈಕ್ಷಣಿಕ ಮಾಹಿತಿ, ವಾಸ ಸ್ಥಳ ಹಾಗೂ ವಲಸೆ ಮಾಹಿತಿ, ಕುಟುಂಬದವರಿಂದ ಸ್ವೀಕಾರ ಹಾಗೂ ಕುಟುಂಬದ ಮೇಲಿನ ಅವಲಂಬನೆ ಮಾಹಿತಿ, ಉದ್ಯೋಗ ಮತ್ತು ಆದಾಯದ ಮಾಹಿತಿ, ಸರ್ಕಾರಿ ಸೌಲಭ್ಯಗಳನ್ನು ಪಡೆದಿರುವ ಮಾಹಿತಿ, ಮನೆ, ನಿವೇಶನ ಹಾಗೂ ಕೃಷಿ ಭೂಮಿ ಹೊಂದಿರುವ ಮಾಹಿತಿ, ಅವರ ದೃಢೀಕರಣಕ್ಕಾಗಿ ಶಸ್ತ್ರ ಚಿಕಿತ್ಸೆಗೊಳಗಾದ ಮಾಹಿತಿ, ಆರೋಗ್ಯದ ಸ್ಥಿತಿಗತಿ ಮಾಹಿತಿ, ಕೌಶ್ಯಲ ತರಬೇತಿ ಮಾಹಿತಿ, ವಾಸದ ಮನೆಗಳು ಹಾಗೂ ಮೂಲಭೂತ ಸೌಕರ್ಯಗಳ ಮಾಹಿತಿಯು ಒಳಗೊಂಡಿದೆ.
ರಾಜ್ಯದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಸ್ಥಿತಿಗತಿ ಅರಿಯಲು, ಪುನರ್ವಸತಿ ಕಲ್ಪಿಸಲು ಮತ್ತು ಸರಕಾರದ ಸೌಲಭ್ಯಗಳನ್ನು ಒದಗಿಸುವ ಹಿನ್ನೆಲೆಯಲ್ಲಿ ಅವರ ನಿಖರ ಮಾಹಿತಿ ಸಂಗ್ರಹಿಸುವುದಕ್ಕಾಗಿ ಮೂಲಹಂತದ ಸಮೀಕ್ಷೆ ನಡೆಸಲಾಗಿತ್ತು. ಈಗ ಬಂದಿರುವ ವರದಿಯನ್ನು ಆಧರಿಸಿ ಸರಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದೆ.
– ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು.
ಹುಬ್ಬಳ್ಳಿಯಲ್ಲಿ ಬಡವರಿಗೆ ಮನೆ ಹಸ್ತಾಂತರಕ್ಕೆ ಸಿಎಂ ಸಿದ್ಧರಾಮಯ್ಯ, ಎಐಸಿಸಿ ಅಧ್ಯಕ್ಷ ಖರ್ಗೆ ಚಾಲನೆ
CRIME NEWS: ಹಣಕಾಸಿನ ವಿಚಾರಕ್ಕೆ ‘ಅಣ್ಣ-ತಮ್ಮ’ನನ್ನೇ ಕೊಂದ ಸ್ನೇಹಿತ; ಹೊನ್ನಾವರ ಪೊಲೀಸರಿಂದ ಮೂವರು ಅರೆಸ್ಟ್








