ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ ನಡೆದಿದ್ದು, ಮದುವೆ ಆಗಿ 3 ವರ್ಷವಾದ್ರೂ ಮಕ್ಕಳಾಗಿಲ್ಲವೆಂದು ಕಾಟ ಕೊಟ್ಟ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಗಿನಹಾಳದಲ್ಲಿ ಘಟನೆ ನಡೆದಿದ್ದು, ಪತಿ ಫರೀರಪ್ಪ ಗಿಲಕ್ಕನವರ ಪತ್ನಿ ರಾಜೇಶ್ವರಿ (21) ಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಂದು ಕಥೆ ಕಟ್ಟಿದ್ದಾನೆ. ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾಳೆ ಎಂದು ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಅಂತ್ಯಕ್ರಿಯೆ ವೇಳೆ ಮಗಳ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜೇಶ್ವರಿ ಕುತ್ತಿಗೆ ಭಾಗದಲ್ಲಿ ಮಾರ್ಕ್ ಇದ್ದ ಹಿನ್ನೆಲೆಯಲ್ಲಿ ಅನುಮಾನ ಬಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಚಾರಣೆ ವೇಳೆ ತಾನೇ ಕೊಲೆ ಮಾಡಿದ್ದಾಗಿ ಫಕೀರಪ್ಪ ಹೇಳಿದ್ದಾನೆ. ಸದ್ಯ ಆರೋಪಿಯನ್ನು ಬೈಲಹೊಂಗಲ ಪೊಲೀಸರು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ.








