ಶಿವಮೊಗ್ಗ: ಪ್ರತಿ ಹಂತದಲ್ಲೂ ರೈತ ಸಮುದಾಯವನ್ನು ಹತ್ತಿಕ್ಕುವ ಕೆಲಸ ಸರ್ಕಾರದಿಂದ ನಡೆಯುತ್ತಿದ್ದು, ರೈತರ ಹಿತ ಕಾಯಲು ನಿಟ್ಟಿನಲ್ಲಿ ವೀರ ಸೇನಾನಿಯಂತೆ ಹೋರಾಡಲಾಗುವುದು ಎಂದು ಸೊರಬ ತಾಲೂಕು ರೈತ ಸಂಘದ ನೂತನ ಅಧ್ಯಕ್ಷ ಸುಭಾಷ್ ಜಿರಲೆಕೊಪ್ಪ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ಕಾಲದಲ್ಲೂ ರೈತರ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಹೆಚ್ಚಾಗಿದೆ. ಪಕ್ಷಾತೀತವಾಗಿ ಯುವಕರು ರೈತ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸರ್ಕಾರದ ನೀತಿ ಖಂಡಿಸುವುದು ಮುಖ್ಯವಾಗಿದೆ ಎಂದರು.
ತಾಲ್ಲೂಕಿನ ಕೆಲವು ಭಾಗಗಳಲ್ಲಿ ಬಗರ್ ಹುಕುಂ ಸಾಗುವಳಿ ಮಾಡಲಾಗುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಸರ್ಕಾರ ಯೋಚಿಸುತ್ತಿದೆ. ರೈತರಿಗೆ ಶಾಪವಾಗಿರುವ ಕೃಷಿ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜನವರಿ 28 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ರೈತ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್ ಪಾಟೀಲ್ ಮಾತನಾಡಿ, ಎಪಿಎಂಸಿ ಹಾಗೂ ಕೃಷಿ ಕಾಯ್ದೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರದ್ದುಪಡಿಸುವಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ರೈತರಿಗೆ ಬೆಂಬಲ ಬೆಲೆ ನೀಡುವಂತೆ ಸ್ವಾಮಿನಾಥನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸುವ ಮೂಲಕ ರೈತರ ಹಿತ ಕಾಪಾಡುವಂತೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಮಂಜುನಾಥ್ ಆರೇಕೊಪ್ಪ, ಗೌರವಾಧ್ಯಕ್ಷ ನಾಗೇಂದ್ರಪ್ಪ ಅಂಬಲಿ ಶಾಂತಗೇರಿ, ಜಿಲ್ಲಾ ಕಾರ್ಯಾಧ್ಯಕ್ಷ ಹೇಮಗಿರಿ, ನಾರಾಯಣಪ್ಪ ದೇವಿಕೊಪ್ಪ, ಜಿಲ್ಲಾ ಪ್ರಧಾನ ಯೋಗೇಶ್, ಲೋಕಪ್ಪ ಮರೂರು, ಸುರೇಶ್ ನಾಯಕ್, ಮಹೇಶ್ ಬೆದವಟ್ಟಿ,ಬಸವರಾಜ್, ಬಸವರಾಜ್ ಆರೇಕೊಪ್ಪ, ನವೀನ್ ಮಳಲಗದ್ದೆ, ಧನಂಜಯ ಶಿಕಾರಿಪುರ, ದಿನೇಶಕುಮಾರ್ ಬೆದವಟ್ಟಿ, ಕಾರ್ತಿಕ್ ಹೊಡಬಟ್ಟೆ, ಸುರೇಶ್ ನೆಗವಾಡಿ, ಸುರೇಶ್ ಕುಂದಗಸವಿ ಇದ್ದರು.
ವರದಿ: ರಾಘವೇಂದ್ರ ಟಿ.ಜಂಗಿನಕೊಪ್ಪ, ಸೊರಬ, ಮೊಬೈಲ್: 9481494834
ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಗೆ ಬ್ಲ್ಯಾಕ್ ಮೇಲ್: ಓರ್ವ ಮಹಿಳೆ ಅರೆಸ್ಟ್








