ಹುಬ್ಬಳ್ಳಿ : ಅಭಿವೃದ್ಧಿ ಮಂಡಳಿ ವತಿಯಿಂದ ಜನವರಿ 24 ರಂದು 42,345 ಬಡ ಕುಟುಂಬಗಳಿಗೆ ಮನೆಗಳ ಹಂಚಿಕೆ ಮಾಡಲಾಗುವುದು. ಜನವರಿ 24 ರಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.
ಇಂದು ಹುಬ್ಬಳಿಯ ಮಂಟೂರು ರಸ್ತೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ನಂತರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ರಾಜ್ಯಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವರಾದ ಡಾ.ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಕಾರ್ಯಕ್ರಮ ಸ್ಥಳದಲ್ಲಿ 6 ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸಲು ರಸ್ತೆ, ಪ್ರವೇಶ ವ್ಯವಸ್ಥೆ ಮಾಡಲಾಗಿದೆ.
ಸುಮಾರು 2 ಸಾವಿರಕ್ಕೂ ಅಧಿಕ ಬಸ್ ಗಳು, 7 ಸಾವಿರಕ್ಕೂ ಹೆಚ್ಚು ಕಾರ, ಟ್ಯಾಕ್ಸಿ ಗಳು ಸೇರಿದಂತೆ ದ್ವಿ ಚಕ್ರ ವಾಹನಗಳಲ್ಲಿ ಫಲಾನುಭವಿಗಳು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಟ್ರಾಫಿಕ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುವುದು. ಸಾರ್ವಜನಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು. ಬೃಹತ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಪ್ರಸಾದ ಅಬ್ಬಯ್ಯ ಅವರ ಉಸ್ತುವಾರಿಯಲ್ಲಿ ಪೂರ್ವಸಿದ್ಧತಾ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದು ಅವರು ತಿಳಿಸಿದರು.
300 ಕ್ಕೂ ಹೆಚ್ಚು ಊಟದ ಕೌಂಟರ್ ಗಳನ್ನು ತೆರೆಯಲಾಗುವುದು. ಸಾವಿರಾರು ಸಂಖ್ಯೆಯಲ್ಲಿ ಫಲಾನುಭವಿಗಳು ಪಾಲ್ಗೊಳ್ಳುತ್ತಿದ್ದಾರೆ. ಅದರ ಜೊತೆಗೆ ನಾಲ್ಕು ಜಿಲ್ಲೆಗಳಿಂದ ಫಲಾನುಭವಿಗಳು, ಅಭಿಮಾನಿಗಳು, ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುವರು. ಗುಣಮಟ್ಟದ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂಬರುವ ಬಜೆಟ್ ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಮನೆಗಳನ್ನು ನಿರ್ಮಿಸಲಾಗುವುದು. ಒಟ್ಟಿನಲ್ಲಿ ಬಹಳ ಅರ್ಥಪೂರ್ಣ ಕಾರ್ಯಕ್ರಮ ಇದಾಗಲಿದೆ ಎಂದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಬಡವರಿಗೆ ಉತ್ತಮ ಮನೆಗಳನ್ನು ನಿರ್ಮಿಸಿ, ವಿತರಣೆ ಮಾಡಲಾಗುತ್ತಿದೆ. ಆಸ್ಪತ್ರೆ, ಗ್ರಂಥಾಲಯ, ಶಾಪಿಂಗ್ ಮಾಲ್ ಸಹ ಇದು ಒಳಗೊಂಡಿರಲಿದೆ. ಬಾಲ್ಕನಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಬಹಳ ಸುಂದರವಾಗಿ ಮನೆಗಳನ್ನು ನಿರ್ಮಿಸಲಾಗಿದೆ. ಮನೆಗಳ ನಿರ್ಮಾಣದ ಶೈಲಿ ನನಗೆ ತೃಪ್ತಿ ತಂದಿದೆ. ಬೆಂಗಳೂರಿನ ಗೇಟೆಡ್ ಕಮ್ಯುನಿಟಿ ಮಾದರಿ ಮನೆಗಳನ್ನು ಕಟ್ಟಲಾಗಿದೆ. ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಿದ ಬಳಿಕ ಅವರು ಸ್ವಚ್ಛಂದವಾಗಿ ಮನೆಗಳನ್ನು ಇಟ್ಟುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶಾಸಕ ಪ್ರಸಾದ ಅಬ್ಬಯ್ಯ, ಪ್ರಭಾರ ಜಿಲ್ಲಾಧಿಕಾರಿಗಳಾದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್, ಡಿಸಿಪಿಗಳಾದ ರವೀಶ ಸಿ.ಆರ್., ಮಹಾನಿಂಗ ನಂದಗಾವಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ರುದ್ರೇಶ ಘಾಳಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಸಂತೋಷ್ ಬಿರಾದಾರ,
ಉಪವಿಭಾಗಾಧಿಕಾರಿ ಶಾಲಂ ಹುಸೇನ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷರಾದ ಸದಾನಂದ ಡಂಗನವರ, ಮುಖಂಡರಾದ ಅಲ್ತಾಫ್ ಹಳ್ಳೂರ್, ಅನಿಲಕುಮಾರ ಪಾಟೀಲ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಉಪಸ್ಥಿತರಿದ್ದರು.








