ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕೆಳದಿ ವ್ಯಾಪ್ತಿಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಉಂಟುಮಾಡಿದೆ. ಮುಂಜಾಗ್ರತೆಯ ಕ್ರಮವಾಗಿ ಅರಣ್ಯ ಇಲಾಖೆಯಿಂದ ಸೆರೆಗೆ ಬೋನು ಇರಿಸಲಾಗಿದೆ.
ಕಳೆದ ಒಂದು ವಾರಗಳಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕೆಳದಿ ವ್ಯಾಪ್ತಿಯ ಹಳ್ಳಿಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ರಾತ್ರಿ ಬೈಕ್ ನಲ್ಲಿ ಓಡಾಡುವಾಗ ವ್ಯಕ್ತಿಯೊಬ್ಬರು ಪ್ರತ್ಯಕ್ಷವಾಗಿ ಚಿರತೆ ನೋಡಿರುವುದಾಗಿ ಸುದ್ದಿ ಹರಿದಾಡುತ್ತಿದೆ.
ಕೆಳದಿ ಅರಣ್ಯ ವ್ಯಾಪ್ತಿಯ ಮೆಳವರಿಗೆ, ಬಳಿಕಲ್ಲು, ಕಾಗೋಡು, ಕೆಳದಿ, ಮಾಸೂರು, ಯಲಕುದ್ಲಿ ಅನಾನಸ್ ಪ್ಲಾಂಟ್, ಹಾರಗೊಪ್ಪ ವ್ಯಾಪ್ತಿಯಲ್ಲಿ ಚಿರತೆ ಓಡಾಟದ ಗುರುತುಗಳು ಪತ್ತೆಯಾಗಿವೆ. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇಳವರಿಯಲ್ಲಿ ಅರಣ್ಯ ಇಲಾಖೆಯಿಂದ ಚಿರತೆ ಸೆರೆಗೆ ಬೋನ್ ಇರಿಸಲಾಗಿದೆ.
ಶೀಘ್ರವೇ ಚಿರತೆ ಸೆರೆಗೆ ಗ್ರಾಮಸ್ಥರ ಒತ್ತಾಯ
ಕೆಳದಿ ವ್ಯಾಪ್ತಿಯಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಜನರು ಸಂಚಾರಕ್ಕೆ ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಹೊರ ಬರೋದಕ್ಕೂ ಹೆದರುವಂತೆ ಆಗಿದೆ. ಹೀಗಾಗಿ ಶೀಘ್ರವೇ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ
ಕಳೆದ ಒಂದು ವಾರಗಳಿಂದ ಕೆಳದಿ ವ್ಯಾಪ್ತಿಯಲ್ಲಿ ಚಿರತೆ ಓಡಾಟದ ಹೆಜ್ಜೆ ಗುರುತು ಪತ್ತೆಯಾಗಿವೆ. ಅದು ಓಡಾಟದ ಜಾಡು ಆಧರಿಸಿ ಸೆರೆಗೆ ಬೋನು ಇರಿಸಲಾಗಿದೆ. ಚಿರತೆ ಸೆರೆ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯು ನಡೆಸುತ್ತಿದೆ. ಶೀಘ್ರದಲ್ಲೇ ಪತ್ತೆ ಹಚ್ಚಿ, ಸೆರೆ ಹಿಡಿಯಲಾಗುತ್ತದೆ ಎಂಬುದಾಗಿ ಸಾಗರ ವಲಯ ಅರಣ್ಯಾಧಿಕಾರಿ ಅಣ್ಣಪ್ಪ ತಿಳಿಸಿದ್ದಾರೆ.
ಕೆಳದಿ ಆರ್ ಎಫ್ ಓ ವಿಜಯಕುಮಾರ್ ಹಾಗೂ ಸಿಬ್ಬಂದಿಗಳು ಚಿರತೆ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸಾರ್ವಜನಿಕರು ರಾತ್ರಿ ಹೊತ್ತಿನಲ್ಲಿ ಕೆಳದಿ ವ್ಯಾಪ್ತಿಯ ಗ್ರಾಮದಲ್ಲಿ ಓಡಾಟ ತಪ್ಪಿಸುವಂತೆ ಆರ್ ಎಫ್ ಓ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








