ಉಜಿರೆ: ಇಲ್ಲಿನ ರುಡ್ ಸೆಟ್ ಸಂಸ್ಥೆಯಲ್ಲಿ ಪ್ರಸ್ತುತ ನಡೆಯುತ್ತಿರುವ ಸ್ವ ಉದ್ಯೋಗ ತರಬೇತಿಗಳಾದ ಗೃಹೋಪಯೋಗಿ ವಿದ್ಯುತ್ ಉಪಕರಣಗಳ ದುರಸ್ತಿ, ದ್ವಿಚಕ್ರ ವಾಹನ ರಿಪೇರಿ ಹಾಗೂ ಮಹಿಳಾ ಬ್ಯೂಟಿ ಪಾರ್ಲರ್ ನಿರ್ವಹಣೆ ತರಬೇತಿಗಳ ಶಿಬಿರಾರ್ಥಿಗಳು, ರುಡ್ ಸೆಟ್ ಸಂಸ್ಥೆಗಳ ಅಧ್ಯಕ್ಷರೂ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆಗಿರುವ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅವರನ್ನು ಸೌಜನ್ಯ ಭೇಟಿ ಮಾಡಿ, ತಮ್ಮ ತರಬೇತಿ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಇಂದಿನ ಜೀವನದಲ್ಲಿ ಈ ಮೂರು ತರಬೇತಿ ವಿಷಯಗಳು ಅತ್ಯಂತ ಅವಶ್ಯಕವಾಗಿವೆ. ಕಲಿತ ವೃತ್ತಿಯನ್ನು ಆತ್ಮವಿಶ್ವಾಸದಿಂದ ಸ್ವ ಉದ್ಯೋಗವಾಗಿ ಕೈಗೊಂಡು, ಸ್ವಾವಲಂಬಿ ಜೀವನ ನಡೆಸಬೇಕು. ಶ್ರಮ ಮತ್ತು ಶಿಸ್ತಿನಿಂದ ತೊಡಗಿಸಿಕೊಂಡರೆ ಯಶಸ್ಸು ಖಂಡಿತ ಎಂದು ಶಿಬಿರಾರ್ಥಿಗಳಿಗೆ ಪ್ರೇರಣಾದಾಯಕವಾಗಿ ಶುಭ ಹಾರೈಸಿದರು.

ಈ ಭೇಟಿಯ ಸಂದರ್ಭದಲ್ಲಿ ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯಕುಮಾರ್, ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಹಾಗೂ ಕೆ. ಕರುಣಾಕರ ಜೈನ್, ಅತಿಥಿ ಉಪನ್ಯಾಸಕರಾದ ವಿರೂಪಾಕ್ಷ ಮತ್ತು ದೇವರಾಜ್ ಹಾಗೂ ಮಾಧವಿ ರೈ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ರುಡ್ ಸೆಟ್ ಸಂಸ್ಥೆಯಲ್ಲಿ ಪಡೆದ ಕೌಶಲ್ಯಾಧಾರಿತ ತರಬೇತಿ, ಮಾರ್ಗದರ್ಶನ ಹಾಗೂ ಸ್ವ ಉದ್ಯೋಗದತ್ತ ಪಡೆದ ಪ್ರೇರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಭೇಟಿಯು ಶಿಬಿರಾರ್ಥಿಗಳಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ಮೂಡಿಸಿತು.








