ಬೆಂಗಳೂರು : ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಹಣಕಾಸಿನ ಅಕ್ರಮ ನಡೆದಿಲ್ಲ ಎಂಬುದನ್ನು ಸಾಬೀತುಗೊಳಿಸಿರುವ ಲೋಕಾಯುಕ್ತ, ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ. ಇದರಿಂದಾಗಿ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಎದುರಿಸುತ್ತಿದ್ದ ನಿಗಮದ ಅಧ್ಯಕ್ಷ ನರೇಶ್ ಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ದಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧೀನದಲ್ಲಿರುವ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ 2020-21, 2021-22, 2022-23 ಈ ಅವಧಿಯಲ್ಲಿ “ಸಹಾಯ ಧನ ಯೋಜನೆಯ” ಹೆಸರಿನಲ್ಲಿ ಕೋಟ್ಯಾಂತರ ಹಣ ಅವ್ಯವಹಾರವಾಗಿದೆ. ಫಲಾನುಭವಿಗಳಿಗೆ ಸಿಗಬೇಕಾದ ಸಹಾಯ ಧನ ದುರುಪಯೋಗವಾಗಿದೆ ಎಂದು ಆರೋಪಿಸಿ ದೂರುದಾರರು ಲೋಕಾಯುಕ್ತದಲ್ಲಿ ಪ್ರಕರಣದ ದಾಖಲು ಮಾಡಿದ್ದರು.
ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿದ ಲೋಕಾಯುಕ್ತ, ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ದೂರಿನಲ್ಲಿ ನೀಡಿರುವ ಆರೋಪಗಳಿಗೆ ಯಾವುದೇ ಸಾಕ್ಷಾಧಾರಗಳಿಲ್ಲ. ಸಿಕ್ಕ ಸಾಕ್ಷಿಗಳು ಸಹಾಯ ಧನ ಸಿಕ್ಕಿರುವ ಬಗ್ಗೆ ಖಚಿತ ಮಾಹಿತಿ ನೀಡಿದ್ದು, ಈ ಎಲ್ಲ ವಿಷಯಗಳನ್ನು ಆಧರಿಸಿ ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ ಎಂದು ಲೋಕಾಯುಕ್ತ ತಿಳಿಸಿದೆ.
ಆರೋಪವೇನು?
ಸವಿತಾ ಸಮಾಜದವರಿಗಾಗಿ ಮೀಸಲಾಗಿರುವ ವಿವಿಧ ಧನ ಸಹಾಯ ಯೋಜನೆಗಳನ್ನು ಅನರ್ಹರಿಗೆ ಹಾಗೂ ಸುಳ್ಳು ವ್ಯಕ್ತಿಗಳ ಪಟ್ಟಿ ಸೃಷ್ಟಿಸಿ 5 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಲಪಟಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಅಕ್ರಮ ಎಸಗಿದವರ ವಿರುದ್ಧ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ದೂರುದಾರರು ಲೋಕಾಯುಕ್ತದಲ್ಲಿ ದೂರು ದಾಖಲು ಮಾಡಿದ್ದರು.
ಸಾಕ್ಷಿಗಳೇ ಇಲ್ಲ
ದೂರು ಸ್ವೀಕರಿಸಿದ ಲೋಕಾಯಕ್ತ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಿತು. ವಿವಿಧ ಯೋಜನೆಗಳಿಗಾಗಿ ಸರಕಾರ ಬಿಡುಗಡೆ ಮಾಡಿದ್ದ 12 ಕೋಟಿ ರೂ .ಲೆಕ್ಕದ ವಿವಿರವನ್ನು ಪಡೆಯಿತು. ಫಲಾನುಭವಿಗಳ ಪಟ್ಟಿ ಪಡೆದು, ನೈಜ್ಯ ಮಾಹಿತಿ ಸಂಗ್ರಹಣೆಗೆ ಮುಂದಾಯಿತು. ಈ ವೇಳೆ ಅರ್ಹ ಫಲಾನುಭವಿಗಳ ಖಾತೆಗೆ ಸಹಾಯ ಧನ ರೂಪದಲ್ಲಿ ಹಣ ಜಮೆಯಾಗಿರುವುದನ್ನು ಫಲಾನುಭವಿಗಳು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರ ಪೋನ್ ವ್ಯಾಪ್ತಿ ಪ್ರದೇಶದಿಂದ ಹೊರಗಿರುವುದಾಗಿ ಲೋಕಾಯುಕ್ತ ವರದಿ ಮಾಡಿದೆ. ಸಹಾಯ ಧನವನ್ನು ಪಟ್ಟಿಯನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ 7 ರಿಂದ 8 ಅಧಿಕಾರಿಗಳನ್ನು ಒಳಗೊಂಡ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇನ್ನೂ ಸಹಾಯ ಧನ ಕೂಡ ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಎಲ್ಲಿಯೂ ಅವ್ಯವಹಾರ ನಡೆದಿರುವುದಕ್ಕೆ ಸಾಕ್ಷಾಧಾರಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಯಾವುದೇ ಹಣ ದುರುಪಯೋಗವಾಗದೇ ಇರುವುದನ್ನು ಲೋಕಾಯಕ್ತ ತನಿಖೆಯಲ್ಲಿ ಸಾಬೀತುಗೊಂಡಿದೆ. ಇದನ್ನೇ ದೂರು ದಾರರಿಗೂ ತಿಳಿಸಿದ್ದು, ಅವರಿಂದ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ದೂರುದಾರು ಸಲ್ಲಿಸಿದ ಪ್ರತ್ಯುತ್ತರಲ್ಲಿ ಆರೋಪಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳನ್ನು ಸಲ್ಲಿಸಿಲ್ಲ. ಫಲಾನುಭವಿಗಳಿಂದಲೂ ಯಾವುದೇ ದೂರು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಮುಕ್ತಾಯಗೊಳಿಸಬಹುದಾಗಿದೆ ಎಂದು ಲೋಕಾಯುಕ್ತ ತಿಳಿಸಿದೆ.








