ಬೆಂಗಳೂರು: ರಾಜ್ಯದಲ್ಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹೊಸ ಮಾರ್ಗಸೂಚಿಯನ್ನು ಶಿಕ್ಷಣ ಇಲಾಖೆಯಿಂದ ಪ್ರಕಟಿಸಲಾಗಿದೆ. ಪ್ರಕಟಿತ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳು, ಶಿಕ್ಷಕರು ಸಹ ಪರೀಕ್ಷೆ ವೇಳೆ ಮೊಬೈಲ್ ಬಳಸುವಂತಿಲ್ಲ ಎಂಬುದಾಗಿ ತಿಳಿಸಲಾಗಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-1ನ್ನು ದಿನಾಂಕ: 05.01.2026 ರಿಂದ 10.01.2026 ರವರೆಗೆ ನಡೆಸಲಾಗಿರುತ್ತದೆ. ಪೂರ್ವ ಸಿದ್ಧತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪುಶ್ನೆ ಪತ್ರಿಕೆಗಳನ್ನು ಮಂಡಲಿಯಿಂದ ಸಿದ್ಧಪಡಿಸಿ, ಅಯಾ ದಿನದ ಪ್ರಶ್ನೆಪತ್ರಿಕೆಯನ್ನು ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಸಂಬಂಧಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಯನ್ನು ಮುದ್ರಿಸಿಕೊಂಡು ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸಲು ಉಲ್ಲೇಖಿತ-1ರ ಮಾರ್ಗಸೂಚಿಯಲ್ಲಿ ವಿವರವಾಗಿ ತಿಳಿಸಲಾಗಿತ್ತದೆ ಎಂದಿದ್ದಾರೆ.
ಡೌನ್‌ಲೋಡ್ ಮಾಡಿಕೊಂಡಿರುವ ಪ್ರಶ್ನೆಪತ್ರಿಕೆಯ ಮೇಲೆ ಸಂಬಂಧಿಸಿದ ಶಾಲಾ ಸಂಕೇತ Watermark ಬರುವಂತೆ ಕ್ರಮವಹಿಸಲಾಗಿತ್ತು. ಯಾವುದಾದರೂ ಶಾಲೆಯ ಪಶ್ನೆಪತ್ರಿಕೆಗಳು ಪರೀಕ್ಷಾ ಪೂರ್ವದಲ್ಲಿ ಮತ್ತು ಪರೀಕ್ಷಾ ಸಂದರ್ಭದಲ್ಲಿ ಸೋರಿಕೆಯಾದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಮೇಲೆ ಮತ್ತು ಇದಕ್ಕೆ ಸಹಕರಿಸಿದವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದೆಂದು ತಿಳಿಸಲಾಗಿತ್ತು. ಆದಾಗ್ಯೂ ಸಹ ಪೂರ್ವಸಿದ್ಧತಾ ಪರೀಕ್ಷೆ-1ರಲ್ಲಿ ಕೆಲವು ಮುಖ್ಯೋಪಾಧ್ಯಾಯರು ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಾರಂಭವಾಗುವ ಸಮಯಕ್ಕಿಂತ ಮುಂಚಿತವಾಗಿ ಸೋರಿಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಕಂಡುಬಂದಿರುತ್ತದೆ. ಈ ರೀತಿಯಾಗಿ ಪ್ರಶ್ನೆಪತ್ರಿಕೆಗಳು ಸೋರಿಕೆ ಮಾಡಿರುವುದರಿಂದ ಇಲಾಖೆಗೆ ಮುಜುಗರ ಉಂಟಾಗಿರುತ್ತದೆ. ಈ ಕೃತ್ಯವನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೈಬರ್ ಆರ್ಥಿಕ ಮತ್ತು ಮಾದಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದೂರು ದಾಖಲಿಸಿ, ಕೃತ್ಯವೆಸಗಿದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ-2 ಮತ್ತು 3 ನ್ನು ಆಯುಕ್ತರ ಕಛೇರಿಯ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ. ಈ ಸಂಬಂಧ ಆಯುಕ್ತಾಲಯದ ಹಂತದಲ್ಲಿ ಪರೀಕ್ಷಾ ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಯನ್ನಾಗಿ ನಿರ್ದೇಶಕರು (ಪ್ರೌಢ ಶಿಕ್ಷಣ), ಆಯುಕ್ತರ ಕಛೇರಿ, ನೃಪತುಂಗ ರಸ್ತೆ, ಬೆಂಗಳೂರು ಇವರನ್ನು ನೇಮಿಸಲಾಗಿದೆ ಎಂದಿದ್ದಾರೆ.









