ಶಿವಮೊಗ್ಗ: ಫೆಬ್ರವರಿ.3ರಿಂದ ಸಾಗರದ ಪ್ರಸಿದ್ಧ ಮಾರಿಕಾಂಬ ಜಾತ್ರೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ನಗರ ಪ್ರದಕ್ಷಿಣೆ ಮಾಡಿದರು. ಆ ಮೂಲಕ ಮಾರಿ ಜಾತ್ರೆಯ ಪ್ರಯುಕ್ತ ನಡೆಯುತ್ತಿರುವಂತ ಸಿದ್ಧತೆಗಳನ್ನು ವೀಕ್ಷಿಸಿದರು.
ಇಂದು ಶಿವಮೊಗ್ಗದ ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಮಾರಿಕಾಂಬ ಜಾತ್ರೆಯ ಪ್ರಯುಕ್ತ ಉಳ್ಳೂರು, ಭೀಮನಕೋಣೆ, ಕಲ್ಮನೆ, ಯಡಜಿಗಳೆಮನೆ, ಖಂಡಿಕಾ, ಭೀಮನೇರೆ ಹಾಗೂ ನಾಡಕಲಸೆ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಪಿಡಿಓಗಳ ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಸಾಗರದ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತೆ ಸೂಚಿಸಿದರು.
ಈ ಬಳಿಕ ಮಾರಿಕಾಂಬ ದೇವಸ್ಥಾನದ ಬಳಿಗೆ ತೆರಳಿದಂತ ಅವರು, ಜಾತ್ರೆಯ ಪ್ರಯುಕ್ತ ನಡೆಯುತ್ತಿದ್ದಂತ ಸಿದ್ಧತೆಗಳನ್ನು ವೀಕ್ಷಿಸಿದರು. ಅಲ್ಲಿಂದ ನಡೆದುಕೊಂಡೇ ನಗರಸಭೆಯವರೆಗೆ ತೆರಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು, ಮಾರಿಕಾಂಬ ಜಾತ್ರೆಯ ಪ್ರಯುಕ್ತ ಏನೆಲ್ಲಾ ತಯಾರಿ ನಡೆಸಬೇಕು. ವಿದ್ಯುತ್ ದೀಪಾಲಂಕಾರ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದರು.

ಆ ನಂತ್ರ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಎಲ್ಲರ ಸಹಕಾರದೊಂದಿಗೆ ಈ ಬಾರಿ ಮಾರಿಕಾಂಬ ಜಾತ್ರೆಯನ್ನು ನಡೆಸಲಾಗುತ್ತಿದೆ. ಅದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ವಿವಿಧೆಡಗಳಿಂದ ಮಾರಿಕಾಂಬ ಜಾತ್ರೆಗೆ ಆಗಮಿಸುತ್ತಾರೆ. ಅವರಿಗೆ ಯಾವುದೇ ರೀತಿಯ ಕೊರತೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ದ್ವಾರ ಬಾಗಿಲು ನಿರ್ಮಾಣ ಮಾಡಲಾಗುತ್ತದೆ ಎಂದರು.
ನಾಳೆ ಡಿಸಿ, ಎಸ್ಪಿ, ಎಎಸ್ಪಿ ಸೇರಿದಂತೆ ವಿವಿಧ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಮಾರಿಕಾಂಬ ಜಾತ್ರೆಯ ಪ್ರಯುಕ್ತ ಚರ್ಚಿಸಲು ಕರೆಯಲಾಗಿದೆ. ಮೂರು ಡಿವೈಎಸ್ಪಿ ಜಾತ್ರೆಗೆ ಭದ್ರತಾ ವ್ಯವಸ್ಥೆಗೆ ಹಾಕಲು ಸೂಚಿಸಲಾಗಿದೆ. ಅಧಿಕಾರಿಗಳನ್ನು ಜಾತ್ರಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಅವರು ಜಾತ್ರೆಯ 9 ದಿನಗಳ ಕಾಲ ಕಾರ್ಯವನ್ನು ನಿರ್ವಹಿಸಬೇಕು ಎಂದರು.
ಮಾರಿಕಾಂಬ ದೇವಸ್ಥಾನದ ಸಮಿತಿಯಿಂದ ಕಲ್ಯಾಣ ಮಂಟಪ, ಶಾಲೆ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದೇ ಜನವರಿ.26ರಂದು ಅದಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಆ ದಿನದಂದು ದೇವಸ್ಥಾನದ ಜಾತ್ರಾ ಸಮಿತಿಯ ಎಲ್ಲಾ ಕಮಿಟಿಯವರು, ಎಲ್ಲಾ ಸಮುದಾಯದವರು ಆಗಮಿಸೋದಕ್ಕೆ ಆಹ್ವಾನಿಸಲಾಗಿದೆ. ಆದಷ್ಟು ಬೇಗ ಕಲ್ಯಾಣ ಮಂಟಪ, ಶಾಲೆ ನಿರ್ಮಾಣವಾಗಲು ಆ ತಾಯಿಯಲ್ಲಿ ಬೇಡಿಕೊಳ್ಳುವುದಾಗಿ ತಿಳಿಸಿದರು.
ಜಾತ್ರೆಗೆ ಬೋನ್ಸರ್ ನಿಯೋಜಿಸೋದಿಲ್ಲ
ಸಾಗರದ ಮಾರಿಕಾಂಬ ಜಾತ್ರೆಗೆ ಬೋನ್ಸರ್ ಇಟ್ಟುಕೊಳ್ಳೋ ಬಗ್ಗೆ ಪ್ಲಾನ್ ಮಾಡಲಾಗಿತ್ತು. ನಾಲ್ಕೈದು ಜನರನ್ನು ದೇವಿಯ ದರ್ಶನದ ಸ್ಥಳದಲ್ಲಿ ನಿಯೋಜಿಸೋದಕ್ಕೆ ಚಿಂತನೆ ಮಾಡಲಾಗಿತ್ತು. ಆದರೇ ಅದನ್ನು ಕೈಬಿಡಲಾಗಿದೆ. ಬೋನ್ಸರ್ ನಿಯೋಜಿಸೋದಿಲ್ಲ. ಪೊಲೀಸ್ ಸಿಬ್ಬಂದಿಯನ್ನೇ ಮಾರಿಕಾಂಬ ದೇವಿಯ ದರ್ಶನದ ಭದ್ರತೆಗಾಗಿ ನಿಯೋಜಿಸುವುದಾಗಿ ಸ್ಪಷ್ಟ ಪಡಿಸಿದರು.
ಈ ವೇಳೆ ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಅಧ್ಯಕ್ಷ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಭಟ್, ಸುಂದರ್ ಸಿಂಗ್, ನಗರಸಭೆ ಪೌರಾಯುಕ್ತ ಹೆಚ್.ಕೆ ನಾಗಪ್ಪ, ಅಶೋಕ್ ಬೇಳೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು.
ಸಿಎಂ ಸೇರಿದಂತೆ 140 ಶಾಸಕರು ನನ್ನ ಬೆಂಬಲಕ್ಕೆ ಇದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್








