ಬೆಂಗಳೂರು: ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು ಮಾರ್ಗಸೂಚಿಯಂತೆ ದಿನಾಂಕ 01-02-2010ರ ಪೂರ್ವದಲ್ಲಿ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ಸಣ್ಣ/ ಅತಿಸಣ್ಣ/ ಮಧ್ಯಮ/ ದೊಡ್ಡ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ ರೂ.6000/-ಗಳನ್ನು, ತಿಂಗಳಿಗೊಮ್ಮೆ 3 ಕಂತುಗಳಲ್ಲಿ ರೂ.2000/- ರಂತೆ ಪ್ರೋತ್ಸಾಹ ಧನವನ್ನು ಇಲ್ಲಿಯವರೆಗೆ ಪಾವತಿಸಲಾಗುತ್ತಿದೆ. ಈ ಪ್ರೋತ್ಸಾಹಧನವನ್ನು ಮುಂದುವರಿಸಲು ಪ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರ್ಕಾರವು ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆಯನ್ನು ಸೃಜಿಸುವುದು ಕಡ್ಡಾಯಗೊಳಿಸಲಾಗಿದೆ.
ಈಗಾಗಲೇ ರಾಜ್ಯ ಸರ್ಕಾರದ ಪ್ರೂಟ್ಸ್ ತಂತ್ರಾಂಶದಿಂದ ದತ್ತಾಂಶವನ್ನು ಹಂಚಿಕೆ ಮಾಡಿ ಕೆಲವು ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ರೈತರ ಗುರುತಿನ ಸಂಖ್ಯೆಯನ್ನು ಸೃಜಿಸಲಾಗಿರುತ್ತದೆ. ಆದರೆ ಹೆಚ್ಚಿನ ಪಿಎಂ ಕಿಸಾನ್ ಫಲಾನುಭವಿಗಳಿಗೆ ಕೇಂದ್ರದ ರೈತರ ಗುರುತಿನ ಸಂಖ್ಯೆಯನ್ನು ಸೃಜನೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ರೈತರ ಇ-ಕೆವೈಸಿ. ಎಲೆಕ್ಟ್ರಾನಿಕ್ ಒಪ್ಪಿಗೆ ಹಾಗೂ ಓಟಿಪಿ ಅಧಾರಿತ ಮೊಬೈಲ್ ಸಂಖ್ಯೆ, ಆಧಾರ್ ಇ-ಸೈನ್ ದೃಡೀಕರಣವು ಕಡ್ಡಾಯವಾಗಿರುತ್ತದೆ.
ಈ ಸಂಬಂಧ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಜಮೀನಿನ ವಿವರಗಳನ್ನು ಪ್ರೊಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡುವುದು ಮತ್ತು ಎಲ್ಲಾ ಜಮೀನಿನ ವಿವರಗಳನ್ನು ದಾಖಲಿಸಿರುವುದಾಗಿ ಘೋಷಣೆಯನ್ನೂ ಸಹ ಒಟಿಪಿ ಆಧಾರದ ಮೇಲೆ ಮಾಡಬೇಕಾಗಿರುತ್ತದೆ. ಕೇಂದ್ರದ ಗುರುತಿನ ನೋಂದಣಿ ಆಗದೆ ಇರುವ ಪಟ್ಟಿಯು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯ ಇರುತ್ತದೆ. ಆದ್ದರಿಂದ ಅಂತಹ ರೈತರು ತಮ್ಮ ಆಧಾರ್ ಕಾರ್ಡಗೆ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್‌ನ್ನು ಮತ್ತು ಪ್ರೂಟ್ಸ್ ತಂತ್ರಾಂಶದಲ್ಲಿ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್ ಅನ್ನು ತೆಗೆದುಕೊಂಡು ರೈತ ಸಂಪರ್ಕ ಕೇಂದ್ರ‍್ರಗಳಿಗೆ ಭೇಟಿ ನೀಡಿ, ಮೇಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡು ಕೇಂದ್ರದ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಇದಾದ ನಂತರವೇ ಮುಂದಿನ ಕಂತಿನ ಪಿ.ಎಂ-ಕಿಸಾನ್ ಯೋಜನೆಯ ಪ್ರೋತ್ಸಾಹಧನ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತದೆ.
ಪ್ರಕ್ರಿಯೆ ದಿನಾಂಕ 01-02-2019ರ ಪೂರ್ವದಲ್ಲಿ ಜಮೀನು ಹೊಂದಿರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಈ ದಿನಾಂಕದ ನಂತರ ಪಿ.ಎಂ-ಕಿಸಾನ್ ಪ್ರೊತ್ಸಾಹಧನ ಪಡೆಯುತ್ತಿರುವ ರೈತರು ತಮ್ಮ ಹೆಸರಿನಲ್ಲಿರುವ ಜಮೀನು ಮಾರಾಟ ಮಾಡಿದ್ದಲ್ಲಿ, ಅವರ ಹೆಸರಿನಲ್ಲಿ ಹಾಲಿ ಯಾವುದೇ ಜಮೀನು ಇಲ್ಲದಂತಹ ರೈತರಿಗೆ ಪಿ.ಎಂ-ಕಿಸಾನ್ ಪಾವತಿಯನ್ನು ನಿಲ್ಲಿಸಲಾಗಿದೆ ಎಂದು ಶಿವಮೊಗ್ಗ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.








