ಬೆಂಗಳೂರು: ಫೋಕ್ಸೋ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಳ್ಳಾರಿಯ ಎಪಿಎಂಸಿ ಠಾಣೆ ಸಿಪಿಐ ಮೊಹಮ್ಮದ್ ರಫಿಕ್ ಎಂಬುವರು,ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದ ದೂರಿನ ಮೇರೆಗೆ ಶ್ರೀರಾಮುಲು ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಬ್ಯಾನರ್ ಗಲಾಟೆ ಖಂಡಿಸಿ ಬಿಜೆಪಿ, ಜ.17ರಂದು ಬಳ್ಳಾರಿಯ ಎಪಿಎಂಸಿ ಆವರಣದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಿತ್ತು. ಈ ಸಮಾವೇಶದಲ್ಲಿ ಬಳ್ಳಾರಿ ಗಾಂಜಾ, ಡ್ರಗ್ಸ್ ಹಬ್ ಆಗಿದೆ ಎಂದು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಶ್ರೀರಾಮುಲು, ಫೋಕ್ಸೋ ಪ್ರಕರಣದಲ್ಲಿ ಬಾಲಕಿಯ ಹೆಸರು, ಶಾಲೆ ಮತ್ತು ವಿವರ ಬಹಿರಂಗಪಡಿಸಿದ್ದರು. ಫೋಕ್ಸೋ ಆ್ಯಕ್ಟ್ ಪ್ರಕಾರ ಯಾವುದೇ ಕಾರಣಕ್ಕೂ ನೊಂದ ಬಾಲಕಿ ಹೆಸರು, ವಿವರ ಬಹಿರಂಗಪಡಿಸುವಂತಿಲ್ಲ.
ಹಾಗಾಗಿ, ಒಂದು ವೇಳೆ ಸಂತ್ರಸ್ತೆ ಹೆಸರು ಬಹಿರಂಗಪಡಿಸಿದರೆ ಇಂತಹ ಪ್ರಕರಣದಲ್ಲಿ 6 ತಿಂಗಳು ಜೈಲುವಾಸ ಮತ್ತು 2 ಲಕ್ಷ ರೂ.ವರೆಗೆ ದಂಡ ಹಾಕುವ ಸಾಧ್ಯತೆ ಇರುತ್ತದೆ.








