ಹಾಸನ : ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಅಟ್ಟಹಾಸ ಮುಂದುವರೆದಿದ್ದು, ಸಾಲ ಕಟ್ಟಿಲ್ಲ ಎಂದು ಫೈನಾನ್ಸ್ ಸಿಬ್ಬಂದಿ ವೃದ್ಧ ದಂಪತಿಯನ್ನು ಮನೆಯಿಂದ ಹೊರಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊರಟಕೆರೆ ಗ್ರಾಮದಲ್ಲಿ ಸಾಲ ಕಟ್ಟಿಲ್ಲ ಎಂದು ವೃದ್ಧ ದಂಪತಿಯನ್ನು ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರಹಾಕಿದ್ದಾರೆ. ಇಕ್ವಿಟಾರ್ ಫೈನಾನ್ಸ್ ಸಿಬ್ಬಂದಿ ದೌರ್ಜನ್ಯದಿಂದ ದಂಪತಿ ಇದೀಗ ಬೀದಿಗೆ ಬಿದ್ದಿದ್ದಾರೆ.
ಕೊರಟಕೆರೆ ಗ್ರಾಮದ ಸಣ್ಣಯ್ಯ (80) ಹಾಗೂ ಜಯಮ್ಮ (75) ವೃದ್ಧ ದಂಪತಿಯನ್ನು ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆಯಿಂದ ಹೊರ ಹಾಕಿ ಮನೆಗೆ ಬೀಗ ಹಾಕಿದೆ. ಕೋರ್ಟ್ ಆದೇಶ ಎಂದು ಮನೆಗೆ ಬೀಗ ಹಾಕಲಾಗಿದೆ. ವೃದ್ಧ ದಂಪತಿಯ ಜಾನುವಾರ ಕೊಟ್ಟಿಗೆಗೂ ಬೀಗ ಹಾಕಲಾಗಿದೆ.
2023ರಲ್ಲಿ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಖಾಸಗಿ ಫೈನಾನ್ಸ್ ಬಳಿ 2 ಲಕ್ಷ ರೂ. ಸಾಲ ಪಡೆದಿದ್ದರು, ಒಂದು ವರ್ಷ ವೃದ್ಧ ದಂಪತಿ ಕಂತು ಕಟ್ಟಿದ್ದು, ಉಳಿದ ಹಣ ಕಟ್ಟದ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಲಾಗಿದೆ ಎನ್ನಲಾಗಿದೆ.








