ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಶನಿವಾರ ಇರಾನ್ ನಲ್ಲಿ ಪ್ರತಿಭಟನಾಕಾರರನ್ನು ಬೆಂಬಲಿಸಿದ್ದಕ್ಕಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು “ಅಪರಾಧಿ” ಎಂದು ಬಣ್ಣಿಸಿದ್ದಾರೆ, ಆದರೆ ಟ್ರಂಪ್, ಆ ದೇಶದಲ್ಲಿ “ಹೊಸ ನಾಯಕತ್ವ” ಕ್ಕೆ ಕರೆ ನೀಡುವ ಮೂಲಕ ಪ್ರತಿಕ್ರಿಯಿಸಿದರು.
ಸರ್ಕಾರಿ ದೂರದರ್ಶನದಲ್ಲಿ ಪ್ರಸಾರವಾದ ಭಾಷಣದಲ್ಲಿ ಇರಾನ್‌ನ ಸುಪ್ರೀಂ ನಾಯಕ ಅಲಿ ಖಮೇನಿ ಅವರು, ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದ “ಹಲವು ಸಾವಿರ” ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಡಿಸೆಂಬರ್ 28 ರಿಂದ ಆರಂಭವಾದ ಪ್ರತಿಭಟನೆ ಮತ್ತು ಅದರ ಮೇಲಿನ ರಕ್ತಸಿಕ್ತ ದಮನಕಾಂಡದಲ್ಲಿ ಸಂಭವಿಸಿದ ಸಾವುನೋವುಗಳ ಬಗ್ಗೆ ಇರಾನ್ ನಾಯಕನೊಬ್ಬ ನೀಡಿದ ಮೊದಲ ಅಧಿಕೃತ ಸುಳಿವು ಇದಾಗಿದೆ.
ಅಶಾಂತಿಯ ಹಿಂದೆ ಅಮೆರಿಕದ ಕೈವಾಡವಿದೆ ಎಂದ ಖಮೇನಿ
“ಈ ದಂಗೆಯಲ್ಲಿ ಅಮೆರಿಕ ಅಧ್ಯಕ್ಷರು ಖುದ್ದಾಗಿ ಹೇಳಿಕೆಗಳನ್ನು ನೀಡುವ ಮೂಲಕ ದೇಶದ್ರೋಹಿಗಳನ್ನು ಪ್ರೋತ್ಸಾಹಿಸಿದ್ದಾರೆ. ‘ನಾವು ನಿಮಗೆ ಬೆಂಬಲ ನೀಡುತ್ತೇವೆ, ಸೇನಾ ಸಹಾಯವನ್ನೂ ನೀಡುತ್ತೇವೆ’ ಎಂದು ಹೇಳಿದ್ದಾರೆ,” ಎಂದು ದೇಶದ ಎಲ್ಲಾ ಪ್ರಮುಖ ನಿರ್ಧಾರಗಳ ಮೇಲೆ ಅಂತಿಮ ಅಧಿಕಾರ ಹೊಂದಿರುವ ಖಮೇನಿ ಕಿಡಿಕಾರಿದರು. ಇರಾನ್‌ನ ಆರ್ಥಿಕ ಮತ್ತು ರಾಜಕೀಯ ಸಂಪನ್ಮೂಲಗಳ ಮೇಲೆ ಅಧಿಪತ್ಯ ಸ್ಥಾಪಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂಬ ತಮ್ಮ ಹಳೆಯ ಆರೋಪವನ್ನು ಅವರು ಪುನರುಚ್ಚರಿಸಿದರು.
“ಸಾವುನೋವುಗಳು, ಆಸ್ತಿಪಾಸ್ತಿ ಹಾನಿ ಮತ್ತು ಇರಾನ್ ರಾಷ್ಟ್ರದ ಮೇಲಿನ ಸುಳ್ಳು ಆರೋಪಗಳ ಕಾರಣಕ್ಕಾಗಿ ನಾವು ಅಮೆರಿಕ ಅಧ್ಯಕ್ಷರನ್ನು ಒಬ್ಬ ‘ಅಪರಾಧಿ’ ಎಂದು ಪರಿಗಣಿಸುತ್ತೇವೆ,” ಎಂದು ಅವರು ಹೇಳಿದರು. ಪ್ರತಿಭಟನಾಕಾರರನ್ನು ಅಮೆರಿಕದ “ಪಾದಚಾರಿ ಸೈನಿಕರು” ಎಂದು ಬಣ್ಣಿಸಿದ ಅವರು, ಇವರು ಮಸೀದಿಗಳು ಮತ್ತು ಶಿಕ್ಷಣ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾರೆ ಮತ್ತು ಜನರಿಗೆ ತೊಂದರೆ ನೀಡುವ ಮೂಲಕ ಸಾವಿರಾರು ಜನರನ್ನು ಕೊಂದಿದ್ದಾರೆ ಎಂದು ಆರೋಪಿಸಿದರು.
ನಾಯಕತ್ವ ಬದಲಾವಣೆಗೆ ಟ್ರಂಪ್ ಕರೆ
ಖಮೇನಿ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಖಮೇನಿ ಅವರ ಸುಮಾರು 40 ವರ್ಷಗಳ ಆಡಳಿತವನ್ನು ಕೊನೆಗೊಳಿಸುವಂತೆ ಕರೆ ನೀಡಿದರು.
ಶನಿವಾರ ‘ಪೊಲಿಟಿಕೊ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, “ಅದೊಂದು ಅಸ್ವಸ್ಥ ಮನಸ್ಥಿತಿಯ ವ್ಯಕ್ತಿ. ಅವರು ತಮ್ಮ ದೇಶವನ್ನು ಸರಿಯಾಗಿ ನಡೆಸಬೇಕು ಮತ್ತು ಜನರನ್ನು ಕೊಲ್ಲುವುದನ್ನು ನಿಲ್ಲಿಸಬೇಕು. ಕಳಪೆ ನಾಯಕತ್ವದಿಂದಾಗಿ ಇರಾನ್ ಇಂದು ವಾಸಿಸಲು ವಿಶ್ವದ ಅತ್ಯಂತ ಕೆಟ್ಟ ಸ್ಥಳವಾಗಿದೆ,” ಎಂದು ಟೀಕಿಸಿದರು. “ಇರಾನ್‌ನಲ್ಲಿ ಈಗ ಹೊಸ ನಾಯಕತ್ವವನ್ನು ಹುಡುಕುವ ಸಮಯ ಬಂದಿದೆ,” ಎಂದು ಅವರು ತಿಳಿಸಿದರು.








