ಶಿವಮೊಗ್ಗ : ಬರುವ ಏಪ್ರಿಲ್ ನಂತರ ಮನೆಗಳಿಂದ ಪ್ಲಾಸ್ಟಿಕ್ ಸಂಗ್ರಹ ಮಾಡಲು ಪ್ರತ್ಯೇಕ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಹಸಿಕಸ ಮತ್ತು ಒಣಕಸ ಸಂಗ್ರಹಣೆ ಜೊತೆಗೆ ಪ್ರತ್ಯೇಕವಾಗಿ ಪ್ಲಾಸ್ಟಿಕ್ ಕಸ ಸಂಗ್ರಹಿಸಲು ಉದ್ದೇಶಿಸಲಾಗಿದೆ ಎಂದು ಸಾಗರ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಪುರಭವನದಲ್ಲಿ ಶನಿವಾರ ನಗರಸಭೆ ವತಿಯಿಂದ 2026-27ನೇ ಸಾಲಿನ ಆಯವ್ಯಯ ತಯಾರಿಸುವ ಕುರಿತು ಕರೆಯಲಾಗಿದ್ದ ಸಾರ್ವಜನಿಕರೊಂದಿಗಿನ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಅವರು, ಪ್ಲಾಸ್ಟಿಕ್ ಸಂಗ್ರಹಣೆ ನಿರ್ವಹಣೆ ಸವಾಲಿನಂತಾಗಿದೆ. ಮೊದಲ ಬಾರಿಗೆ ದಾವಣಗೆರೆ ದಾಲ್ಮಿಯ ಸಿಮೆಂಟ್ ಕಂಪನಿಗೆ ನಗರಸಭೆಯಿಂದ 26 ಟನ್ ಕಸವನ್ನು ಕೆ.ಜಿ.ಗೆ ಒಂದು ಪೈಸೆಯಂತೆ ಕಳಿಸಲಾಗಿದೆ. ಅಲ್ಲಿ ಪ್ಲಾಸ್ಟಿಕನ್ನು ಇಟ್ಟಿಗೆ ತಯಾರಿಸಲು ಉಪಯೋಗಿಸುತ್ತಾರೆ. ಒಂದರ್ಥದಲ್ಲಿ ನಮಗೆ ಪ್ಲಾಸ್ಟಿಕ್ ವಿಲೇವಾರಿಗೆ ಇದ್ದ ಆತಂಕ ದೂರವಾಗಿದೆ. ಸಂಗಳ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್ ಸಂಗ್ರಹಣೆಯನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಬೇರೆಬೇರೆ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ ಎಂದು ಹೇಳಿದರು.
ಸಾಗರ ನಗರವ್ಯಾಪ್ತಿಯಲ್ಲಿ ದಿನದ 24 ಗಂಟೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು 230 ಕೋಟಿ ರೂ. ಮಂಜೂರು ಮಾಡಲು ಅಗತ್ಯ ಸಿದ್ದತೆ ನಡೆದಿದೆ. ಈ ಅನುದಾನದಲ್ಲಿ ನಗರವ್ಯಾಪ್ತಿಯಲ್ಲಿರುವ ನಲ್ಲಿಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಸಮರ್ಪಕ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ನಗರವ್ಯಾಪ್ತಿಯಲ್ಲಿ 12ಸಾವಿರಕ್ಕೂ ಅಧಿಕ ಬೀದಿದೀಪಗಳಿದ್ದು ಅವುಗಳ ನಿರ್ವಹಣೆಗೆ ಸಿಸಿಎಂಎಸ್ ಸ್ಕೀಂನಡಿ ಅಗತ್ಯ ಕ್ರಮ ತೆಗೆದುಕೊಂಡು ಎಲ್.ಇ.ಡಿ. ಬಲ್ಬ್ಗಳನ್ನು ಅಳವಡಿಸಲು ಚಿಂತನೆ ನಡೆಸಲಾಗಿದೆ. ಸಮಾಲೋಚನಾ ಸಭೆಯಲ್ಲಿ ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಬಜೆಟ್ ತಯಾರಿಸುವ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಮಾಜಿ ಸದಸ್ಯ ರವಿಕುಮಾರ್ ಮಾತನಾಡಿ ಈಸ್ವತ್ತು ತುರ್ತಾಗಿ ಸಿಗಬೇಕು. ನಲ್ಲಿಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಕೆ ಮಾಡಲು ಮನವಿ ಮಾಡಿದರೆ, ಮಾಜಿ ಉಪಾಧ್ಯಕ್ಷೆ ಮರಿಯಾ ಲೀಮಾ ಐದಾರು ವಾರ್ಡ್ಗೆ ಒಂದoತೆ ಕಸ ವಿಲೇವಾರಿ ಘಟಕದ ಯಂತ್ರ ಅಳವಡಿಸಲು ಒತ್ತಾಯಿಸಿದರು. ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಮಹೇಶ್ ಹೆಗಡೆ ಬಜೆಟ್‌ನಲ್ಲಿ ಪತ್ರಕರ್ತರ ತುರ್ತು ಆರೋಗ್ಯಕ್ಕಾಗಿ 5 ಲಕ್ಷ ರೂ. ನಿಧಿ ಇರಿಸಲು ಮನವಿ ಮಾಡಿದರೆ, ಎಸ್.ವಿ.ಹಿತಕರ ಜೈನ್ ಸೋಲಾರ್ ಬೀದಿದೀಪ ಅಳವಡಿಸಲು ಮನವಿ ಮಾಡಿದರು. ಸಾಮಾಜಿಕ ಕಾರ್ಯಕರ್ತ ಜಮೀಲ್ ಜಾತ್ರೆ ಹಿನ್ನೆಲೆಯಲ್ಲಿ ಸಾಗರದ ವಾರ್ಡ್ ಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಸಲಹೆ ನೀಡಿದರು. ಪುರುಷೋತ್ತಮ್ ಬೀದಿನಾಯಿಗಳ ಹಾವಳಿ ತಡೆಗಟ್ಟಲು ಒತ್ತಾಯಿಸಿದರು.
ಈ ವೇಳೆ ಸಾಗರ ನಗರಸಭೆಯ ಆರೋಗ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮದನ್, ವ್ಯವಸ್ಥಾಪಕ ಬಾಲಚಂದ್ರ, ಕಂದಾಯ ನಿರೀಕ್ಷಕಿ ಎಸ್.ಎಲ್ ಮಮತಾ ಹಾಜರಿದ್ದರು.








