ನವದೆಹಲಿ: ಕಳೆದ ವರ್ಷ ನವೆಂಬರ್ನಲ್ಲಿ ಸಿಖ್ ತೀರ್ಥಯಾತ್ರೆಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ ಮತ್ತು ನಂತರ ಇಸ್ಲಾಂಗೆ ಮತಾಂತರಗೊಂಡು ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾದ ಭಾರತೀಯ ಮಹಿಳೆ ಸರಬ್ಜೀತ್ ಕೌರ್ ಅವರ ಭಾವನಾತ್ಮಕ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ದೃಢೀಕರಿಸದ ಆಡಿಯೋ ಕ್ಲಿಪ್ನಲ್ಲಿ, ಕೌರ್ ಭಾರತದಲ್ಲಿರುವ ತನ್ನ ಮಾಜಿ ಪತಿಯೊಂದಿಗೆ ಮಾತನಾಡುತ್ತಾ, ಪಾಕಿಸ್ತಾನದಲ್ಲಿ ತನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿಕೊಂಡು ತನ್ನನ್ನು ಮನೆಗೆ ಕರೆತರುವಂತೆ ಕೇಳಿಕೊಳ್ಳುತ್ತಿದ್ದಾರೆ ಎಂದು ನಂಬಲಾಗಿದೆ.
ಪಂಜಾಬ್ನ ಕಪುರ್ತಲಾ ಜಿಲ್ಲೆಯ ಅಮಾನಿಪುರ ಗ್ರಾಮದ ನಿವಾಸಿಯಾಗಿರುವ 48 ವರ್ಷದ ಸಿಖ್ ಮಹಿಳೆ ಕಳೆದ ವರ್ಷ ನವೆಂಬರ್ನಲ್ಲಿ ಗುರುನಾನಕ್ ಅವರ ಜನ್ಮದಿನಕ್ಕೆ ಸಂಬಂಧಿಸಿದ ಉತ್ಸವಗಳಲ್ಲಿ ಭಾಗವಹಿಸಲು ಭಾರತದಿಂದ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ಪ್ರವೇಶಿಸಿದ 2,000 ಸಿಖ್ ಯಾತ್ರಾರ್ಥಿಗಳಲ್ಲಿ ಸೇರಿದ್ದಾರೆ.
ಯಾತ್ರಿಕರು ಕೆಲವು ದಿನಗಳ ನಂತರ ಮನೆಗೆ ಮರಳಿದರು, ಆದರೆ ಕೌರ್ ನಾಪತ್ತೆಯಾದರು. ನವೆಂಬರ್ 4 ರಂದು ಪಾಕಿಸ್ತಾನಕ್ಕೆ ಬಂದ ಒಂದು ದಿನದ ನಂತರ ಲಾಹೋರ್ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಶೇಖುಪುರ ಜಿಲ್ಲೆಯ ನಾಸಿರ್ ಹುಸೇನ್ ಅವರನ್ನು ಕೌರ್ ವಿವಾಹವಾದರು ಎಂದು ಲಾಹೋರ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನಂತರ ತಿಳಿಸಿದ್ದಾರೆ.
ವೈರಲ್ ಆಡಿಯೋ
ಆಡಿಯೋ ಕ್ಲಿಪ್ನಲ್ಲಿ ಕೌರ್ ಅವರು ಪಾಕಿಸ್ತಾನದ ಪರಿಸ್ಥಿತಿ “ಸರಿಯಿಲ್ಲ” ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ. ತಾವು ಮದುವೆಯಾದ ವ್ಯಕ್ತಿ ಮತ್ತು ಆತನ ಕುಟುಂಬದವರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಾನು ಭಾರತಕ್ಕೆ ಮರಳಲು ಬಯಸುವುದಾಗಿ ತಿಳಿಸಿರುವ ಅವರು, ತಾನು ಮರಳಿ ಬಂದ ಮೇಲೆ ತನಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಆ ವ್ಯಕ್ತಿಯಿಂದ (ಭಾರತದಲ್ಲಿರುವ ವ್ಯಕ್ತಿಯಿಂದ) ಭರವಸೆ ಕೇಳಿದ್ದಾರೆ.
“ಇಲ್ಲಿ ನನಗೆ ಕಿರುಕುಳ ನೀಡಲಾಗುತ್ತಿದೆ. ನನ್ನ ಮಕ್ಕಳಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ. ನಾನು ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ಕೊಡುತ್ತಿದ್ದವಳು; ನಾನೊಬ್ಬ ಸರ್ದಾರ್ನಿ, ಆದರೆ ಇಂದು ಹಣಕ್ಕಾಗಿ ಬೇಡುವಂತ ಪರಿಸ್ಥಿತಿ ಬಂದಿದೆ” ಎಂದು ಆ ಮಹಿಳೆ ಅಳಲು ತೋಡಿಕೊಂಡಿದ್ದು, ಮನೆಗೆ ಮರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಆದರೆ, ಈ ಆಡಿಯೋ ಕ್ಲಿಪ್‌ನ ನೈಜತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.
ಮಾಧ್ಯಮ ವರದಿಗಳ ಪ್ರಕಾರ, ಆ ಮಹಿಳೆ ತಾನು ಪಾಕಿಸ್ತಾನಕ್ಕೆ ಗೂಢಚಾರಿಯಾಗಿ ಹೋಗಿಲ್ಲ, ಬದಲಾಗಿ ತನ್ನ ಆಕ್ಷೇಪಾರ್ಹ ಫೋಟೋಗಳನ್ನು ಅಳಿಸಿ ಹಾಕಲು (Delete) ಹೋಗಿದ್ದೆ ಎಂದು ಹೇಳಿದ್ದಾರೆನ್ನಲಾಗಿದೆ.
‘ಟೈಮ್ಸ್ ಆಫ್ ಇಂಡಿಯಾ’ ವರದಿಯ ಪ್ರಕಾರ, ಇಸ್ಲಾಂಗೆ ಮತಾಂತರಗೊಂಡು ಮದುವೆಯಾದ ನಾಸಿರ್ ಹುಸೇನ್ ಎಂಬ ವ್ಯಕ್ತಿಯ ಬಳಿ ತನ್ನ ಆಕ್ಷೇಪಾರ್ಹ ಫೋಟೋಗಳಿದ್ದವು ಮತ್ತು ಅವುಗಳನ್ನು ತೆಗೆದುಹಾಕಲು ತಾನು ಅಲ್ಲಿಗೆ ಹೋಗಿದ್ದೆ ಎಂದು ಕೌರ್ ಆರೋಪಿಸಿದ್ದಾರೆ.








