ಯಶಸ್ವಿನಿ ಯೋಜನೆಯಡಿ 2025-26ನೇ ಸಾಲಿಗೂ ಮುಂದುವರೆಸಲು ಅರ್ಹ ಸದಸ್ಯರ ನೋಂದಣಿ ಪ್ರಾರಂಭಿಸಲಾಗಿದ್ದು, ಈ ಯೋಜನೆಯಡಿ ಸದಸ್ಯತ್ವ ನವೀಕರಣ ಮತ್ತು ಹೊಸ ಸದಸ್ಯರ ನೊಂದಣಿಗೆ ಮಾರ್ಚ್, 31 ರವರೆಗೆ ಅವಕಾಶವಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್.ಡಿ.ರವಿಕುಮಾರ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ ಯಾವುದೇ ಸಹಕಾರ ಸಂಘಗಳು, ಸಹಕಾರ ಬ್ಯಾಂಕ್ಗಿಳು ಮತ್ತು ಸೌಹಾರ್ದ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿರುವವರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಅದರಂತೆ ಈ ಯಶಸ್ವಿನಿ ಯೋಜನೆಯ ವಿಮೆ ಮಾಡಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ನೋಂದಣಿಗೆ ಲಗತ್ತಿಸಬೇಕಾದ ದಾಖಲೆಗಳು: ಅರ್ಜಿ ನಮೂನೆ, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಯೋಜನೆಗೆ ಒಳಪಡುವ ಸದಸ್ಯರ ಪ್ರತಿಯೊಬ್ಬರ ತಲಾ 2 ಭಾವಚಿತ್ರ, ಗ್ರಾಮೀಣ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಗರಿಷ್ಠ 04 ಸದಸ್ಯರ ಕುಟುಂಬ ಒಂದಕ್ಕೆ ರೂ. 500 ಗಳ ವಂತಿಕೆ ಹಾಗೂ 04 ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತಿಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.100 ಗಳನ್ನು ಪಾವತಿಸಬೇಕು.
ನಗರ ಸಹಕಾರ ಸಂಘಗಳ ಹೊಸ ಸದಸ್ಯರ ನೋಂದಣಿ ಹಾಗೂ ನವೀಕರಣಕ್ಕೆ ಸಂಬಂಧಿಸಿದಂತೆ ಗರಿಷ್ಠ 04 ಸದಸ್ಯರ ಕುಟುಂಬ ಒಂದಕ್ಕೆ ರೂ.1 ಸಾವಿರ ವಂತಿಕೆ ಹಾಗೂ 04 ಕ್ಕಿಂತ ಹೆಚ್ಚಿನ ಸದಸ್ಯರುಗಳ ಕುಟುಂಬದ ಪ್ರತೀಯೊಬ್ಬ ಹೆಚ್ಚುವರಿ ಸದಸ್ಯರಿಗೆ ರೂ.200 ಗಳನ್ನು ಪಾವತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರಿಗೆ ಉಚಿತ (ಆರ್.ಡಿ ಸಂಖ್ಯೆಯ ಜಾತಿ ಪ್ರಮಾಣ ಪತ್ರ ನೀಡಿದಲ್ಲಿ ಮಾತ್ರ ಅನ್ವಯವಾಗುತ್ತದೆ).
ಅರ್ಜಿ ಸಲ್ಲಿಸಲು ಮಾರ್ಚ್, 31 ಕೊನೆಯ ದಿನವಾಗಿದೆ. ಕುಟುಂಬದ ಒಬ್ಬ ವ್ಯಕ್ತಿ ಸಂಬಂಧಪಟ್ಟ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದು, 03 ತಿಂಗಳು ಗತಿಸಿದಲ್ಲಿ ಈ ಯೋಜನೆಗೆ ಅರ್ಹರಾಗಿರುತ್ತಾರೆ. ನೋಂದಾಯಿತ ಸದಸ್ಯರ ಕುಟುಂಬಕ್ಕೆ ವಾರ್ಷಿಕ ಗರಿಷ್ಠ ರೂ.5 ಲಕ್ಷದವರೆಗೆ ನೆಟ್ವದರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿದೆ.
ಹೆಚ್ಚಿನ ಮಾಹಿತಿಗೆ ಚೇತನ್ ಬಿ.ಎಸ್.ಯಶಸ್ವಿನಿ ಜಿಲ್ಲಾ ಸಂಯೋಜಕರು, ಕೊಡಗು ಜಿಲ್ಲೆ, ಮೊ.ಸಂ.9591469497 ನ್ನು ಸಂಪರ್ಕಿಸಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್.ಡಿ.ರವಿಕುಮಾರ್ ಅವರು ತಿಳಿಸಿದ್ದಾರೆ.








