ಬಳ್ಳಾರಿ : ನಗರದಲ್ಲಿ ಇಂದು ಬೆಳಿಗ್ಗೆ 10.30 ಗಂಟೆಗೆ ಎಪಿಎಂಸಿ ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕವರ್ಡ್ ಆಕ್ಷನ್ ಪ್ಲಾಟ್‌ಫಾರಂ ನಲ್ಲಿ ಬಿ.ಜೆ.ಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸಭೆ ಹಿನ್ನಲೆಯಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜ.16 ರ ರಾತ್ರಿ 10 ಗಂಟೆಯಿಂದ ಜ.18 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಮಾಡದಂತೆ, ಮದ್ಯದಂಗಡಿಗಳನ್ನು ಮತ್ತು ಬಾರ್ & ರೆಸ್ಟೋರೆಂಟ್‌ಗಳನ್ನು ತೆರೆಯದಂತೆ ಸಂಪೂರ್ಣವಾಗಿ ನಿಷೇಧಿಸಿ, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾ ದಂಡಾಧಿಕಾರಿಯಾದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶಿಸಿದ್ದಾರೆ.
ಬಳ್ಳಾರಿ ನಗರದಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆ ಹಿನ್ನಲೆಯಲ್ಲಿ ಬಿಜೆಪಿ ವತಿಯಿಂದ ಜ.17 ರಂದು ಬೃಹತ್ ಪ್ರತಿಭಟನಾ ಸಭೆ ಆಯೋಜಿಸಿದ್ದು, ಈ ಪ್ರತಿಭಟನಾ ಸಭೆಯು ಶಾಂತ ರೀತಿಯಿಂದ ನಡೆಯುವ ಸಲುವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದು, ಬಂದೋಬಸ್ತ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮಾಡದಂತೆ ಮತ್ತು ಮದ್ಯದಂಗಡಿಗಳನ್ನು ಬಳ್ಳಾರಿ ನಗರದಾದ್ಯಂತ ಮುಚ್ಚುವಂತೆ ನಿಷೇಧಾಜ್ಞೆ ಹೊರಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಯವರು ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜ.16 ರ ರಾತ್ರಿ 10 ಗಂಟೆಯಿಂದ ಜ.18 ರ ಬೆಳಿಗ್ಗೆ 06 ಗಂಟೆಯವರೆಗೆ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆ ಮಾಡದಂತೆ ಮತ್ತು ಮದ್ಯದಂಗಡಿಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಆದೇಶವು ಡಿಸ್ಟಲರೀಸ್ ರಾಜ್ಯದ ವಿವಿಧ ಕೆ.ಎಸ್.ಬಿ.ಸಿ.ಎಲ್ ಡಿಪೊಗಳಿಗೆ ದಾಸ್ತಾನು ವಿಲೇವಾರಿ ಮಾಡಲು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.








