ಶಿವಮೊಗ್ಗ: ಅಕ್ರಮ ಮರಳು ಸಾಗಾಟ ಮಾಡುವವರ ವಿರುದ್ಧ ದೂರು ನೀಡಿದಂತ ವಕೀಲರೊಬ್ಬರನ್ನು ಕೊಲೆಗೆ ಯತ್ನಿಸಿದಂತ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್.ಎಸ್.ಪಿ ಅಂಡ್ ಟೀಂ ದೂರು ದಾಖಲಾದ ಕೆಲವೇ ಗಂಟೆಯಲ್ಲಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮ ಮರಳು ಸಾಗಾಟದ ಬಗ್ಗೆ ವಕೀಲ ದೂರು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಟದ ವಿರುದ್ಧ ಸಿಡಿದೆದ್ದಿದ್ದಂತ ವಕೀಲ ಶರತ್ ಕುಮಾರ್ ಎಂಬುವರು, ರಾತ್ರಿಯ ವೇಳೆಯಲ್ಲಿ ಮರಳು ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು 112ಗೆ ಕರೆ ಮಾಡಿ ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿ ಘಟನಾ ಸ್ಥಳಕ್ಕೆ ತೆರಳಿದ್ದಂತ ಪೊಲೀಸರು ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಂತ ವಾಹನವನ್ನು ಈ ಹಿಂದೆ ಸೀಜ್ ಮಾಡಿದ್ದರು.
ವಕೀಲ ಶರತ್ ಕುಮಾರ್ ಮೇಲೆ ದ್ವೇಷ
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಬಗ್ಗೆ ದೂರು ನೀಡಿದವರು ಯಾರು ಎಂಬುದಾಗಿ ಆರೋಪಿ ದರ್ಶನ್ ಗೆ ಸುಳಿವು ಸಿಕ್ಕಿತ್ತು. ಹೀಗಾಗಿ ವಕೀಲ ಶರತ್ ಕುಮಾರ್ ಮೇಲೆ ದ್ವೇಷ ಸಾಧಿಸಿ, ಅವರ ಮೇಲೆ ದಾಳಿ ಮಾಡೋದಕ್ಕೆ ಸಂಚು ರೂಪಿಸಿದ್ದನು. ಅದರಂತೆ ಇಂದು ಶರತ್ ಕುಮಾರ್ ಮೇಲೆ ಹಳೆಯ ದ್ವೇಷದ ಹಿನ್ನಲೆಯಲ್ಲಿ ಗುಂಪು ಕಟ್ಟಿಕೊಂಡು ದಾಳಿ ಮಾಡಿರುವಂತ ಘಟನೆ ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ಮಧ್ಯರಾತ್ರಿ ವಕೀಲರ ಮೇಲೆ ಮರಳು ದಂಧೆಕೋರರಿಂದ ಮಾರಣಾಂತಿಕ ಹಲ್ಲೆ
ನಿನ್ನೆಯ ಮಧ್ಯರಾತ್ರಿ ಸಾಗರ ತಾಲ್ಲೂಕಿನ ಕರ್ಲಿಕೊಪ್ಪದ ಬಳಿಯಲ್ಲಿ ಊರಿಗೆ ತಮ್ಮ ಕಾರಿನಲ್ಲಿ ಶರತ್ ಕುಮಾರ್ ವಾಪಾಸ್ ಆಗುತ್ತಿದ್ದರು. ಈ ವಿಷಯ ತಿಳಿದಂತ ಆರೋಪಿ ದರ್ಶನ್ ಮತ್ತು ಇತರರು ಸೇರಿಕೊಂಡು, ಕೊರ್ಲಿಕೊಪ್ಪ ಗ್ರಾಮದ ಈಶ್ವರ ದೇವಸ್ಥಾನದ ಬಳಿಯಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಕಾರಿನಿಂದ ಕೆಳಗೆ ಇಳಿದಂತ ವಕೀಲ ಶರತ್ ಕುಮಾರ್ ಮೇಲೆ ಸ್ಕಾರ್ಫಿಯೋ, ಸ್ವಿಫ್ಟ್ ಹಾಗೂ ಎರಡು ಬೈಕ್ ನಲ್ಲಿ ಬಂದಿದ್ದಂತ ಆರೋಪಿಗಳು ಮನ ಬಂದಂತೆ ಥಳಿಸಿದ್ದಾರೆ. ಅಲ್ಲದೇ ವಕೀಲರ ಕಾರನ್ನು ಕಲ್ಲಿನಿಂದ ಜಖಂಗೊಳಿಸಿದ್ದಾರೆ. ಇದಲ್ಲದೇ ವಕೀಲ ಶರತ್ ಕುಮಾರ್ ಮೇಲೆ ಜಂಬಿಟ್ಟಿಗೆ ಕಲ್ಲು ಎತ್ತಿ ಹಾಕಿ ಹತ್ಯೆಗೂ ಪ್ರಯತ್ನಿಸಿದ್ದಾರೆ. ಆ ವೇಳೆ ತಪ್ಪಿಸಿಕೊಳ್ಳುವಾಗ ಕೈಗೆ ಬಲವಾದ ಪೆಟ್ಟು ಬಿದ್ದಿದೆ.
ಆನಂದಪುರ ಪೊಲೀಸ್ ಠಾಣೆಯಲ್ಲಿ ಕೇಸ್, ಪಿಎಸ್ಐ ಪ್ರವೀಣ್ ಅಂಡ್ ಟೀಂನಿಂದ ಐವರು ಅರೆಸ್ಟ್
ಇನ್ನೂ ವಕೀಲ ಶರತ್ ಕುಮಾರ್ ಗೆ ನಮ್ಮ ಸುದ್ದಿಗೆ ಬಂದ್ರೆ ಸುಮ್ಮನೆ ಬಿಡುವುದಿಲ್ಲ. ಎಸ್ ಸಿ, ಎಸ್ಟಿ ಹುಡುಗರಿಂದ ಕೇಸ್ ಹಾಕಿಸಿ ಜೀವ ಸಹಿತ ಬಿಡೋದಿಲ್ಲ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. ಹಲ್ಲೆಗೊಳಗಾದಂತ ವಕೀಲ ಶರತ್ ಕುಮಾರ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು, ಆನಂದಪುರ ಠಾಣೆಗೆ ತೆರಳಿ ನಡೆದಂತ ಘಟನೆ ಸಂಬಂಧ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಆನಂದಪುರ ಠಾಣೆಯಲ್ಲಿ ದರ್ಶನ್, ಪ್ರವೀಣ ಆಲಿಯಾಸ್ ಪುಟ್ಟ, ಶಿವರಾಮ, ದಿವಾಕರ ಹಾಗೂ ಇತರೆ ನಾಲ್ವರ ವಿರುದ್ಧ ಬಿಎನ್ಎಸ್ ಕಾಯ್ದೆಯ ಅಡಿಯಲ್ಲಿ ಕಲಂ 109, 127(2), 324(5), 351(2), 15(2), 118(1), 189(4) 191(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣ ಆಧರಿಸಿ ತನಿಖೆಗೆ ಇಳಿದಂತ ಆನಂದಪುರ ಠಾಣೆಯ ಪಿಎಸ್ಐ ಪ್ರವೀಣ್.ಎಸ್.ಪಿ ಅಂಡ್ ಟೀಂ ಅಕ್ರಮ ಮರಳು ಸಾಗಾಟದ ವಿರುದ್ಧ ದೂರು ನೀಡಿದಂತ ವಕೀಲನನ್ನು ಕೊಲೆಗೆ ಯತ್ನಿಸಿದ ಆರೋಪಿಗಳಾದಂತ ದರ್ಶನ್, ಪ್ರವೀಣ, ಶಿವರಾಮ, ದಿವಾಕರ ಹಾಗೂ ಸತೀಶ್ ಎಂಬ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








