ಮಂಡ್ಯ : ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆದು, ಹಿಂದಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಮುಂದುವರೆಸುವವರೆಗೂ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಗಬೋರನದೊಡ್ಡಿ, ನಿಡಘಟ್ಟ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣ ಮಾಡಿರುವ ನೂತನ ಮಳಿಗೆಗಳನ್ನು ಉದ್ಘಾಟನೆ ಮಾಡಿ ಶುಕ್ರವಾರ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ನಗರದತ್ತ ಕೃಷಿ ಕೂಲಿ ಕಾರ್ಮಿಕರು ವಲಸೆ ತಡೆಯುವುದು, ಸಮಾನ ಕೂಲಿ, ಆರ್ಥಿಕ ಚೈತನ್ಯದಿಂದ ಗ್ರಾಮ ಸ್ವರಾಜ್ಯ ಕಾಣುವ ಉದ್ದೇಶದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಈ ಯೋಜನೆಯಿಂದಾಗಿ ಸಾವಿರಾರು ಕೆರೆ ಕಟ್ಟೆ, ರಸ್ತೆ, ಚರಂಡಿ, ಕಾಲುವೆಗಳು, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ಕಾಯ್ದೆ ಅನುಕೂಲವಾಗುತ್ತಿತ್ತು ಎಂದರು.
ಸ್ಥಳೀಯ ಪಂಚಾಯಿತಿಗಳಲ್ಲಿ ತುರ್ತಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುಮೋದನೆ ಪಡೆಯಬಹುದಿತ್ತು. ಈ ನೂತನ ಯೋಜನೆಯಿಂದ ದೆಹಲಿಯಲ್ಲಿ ಅನುಮೋದನೆ ಪಡೆಯುವ ಹಾಗೆ ಯೋಜನೆ ಜಾರಿಯಾಗುತ್ತಿದ್ದು, ಒಟ್ಟಾರೆ ಗ್ರಾಮೀಣಾಭಿವೃದ್ಧಿಯಲ್ಲಿ ನರೇಗಾ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ನರೇಗಾ ಯೋಜನೆಯ ಆಶಯಗಳಿಗೆ ಜಿ ರಾಮ್ ಜಿ ಯೋಜನೆ ತದ್ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶೇ.60:40 ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಬೇಕು ಎಂಬ ನಿಯಮವನ್ನು ಸೇರಿಸಲಾಗಿದೆ. ಆರ್ಥಿಕ ಹಿನ್ನಡೆಯಲ್ಲಿರುವ ರಾಜ್ಯಗಳ ಬಳಿ ಶೇ.40 ರಷ್ಟು ಅನುದಾನವಿಲ್ಲದೆ, ಕೂಲಿ ಕಾರ್ಮಿಕರಿಗೆ ಕೆಲಸವೇ ಇಲ್ಲದಂತಾಗುತ್ತದೆ. ಇದರಿಂದಾಗಿ ಗ್ರಾಮೀಣಾಭಿವೃದ್ಧಿಯೂ ಸಹ ಕುಂಠಿತವಾಗಲಿದೆ. ಈ ಹಿಂದೆ ಗುತ್ತಿಗೆದಾರರಿಗೆ ನರೇಗಾ ಯೋಜನೆಯಲ್ಲಿ ನಿಷೇಧಿಸಲಾಗಿತ್ತು. ಆದರೆ ಈಗ ಗುತ್ತಿಗೆದಾರರಿಗೆ ಅವಕಾಶ ಮಾಡಿಕೊಡಲಾಗಿದ್ದು, ಉಳ್ಳವರಿಗೆ ಅನುಕೂಲ ಮಾಡುವ ಯೋಜನೆ ಇದಾಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ವಿಚಾರವಾಗಿ ರಾಜ್ಯ ಸರ್ಕಾರ ವಿಶೇಷ ಜಂಟಿ ಅಧಿವೇಶನವನ್ನು ನಡೆಸುತ್ತಿದ್ದು, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು. ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ 10 ಕಿ.ಮೀ ಪಥ ಸಂಚಲನವನ್ನು ನಡೆಸುವ ಮೂಲಕ ಕಾಂಗ್ರೆಸ್ ಪಕ್ಷ ಜನರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು ಎಂದರು.
ನಂತರ ನಿಡಘಟ್ಟ ಗ್ರಾಪಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಡಘಟ್ಟ ಗ್ರಾಮ ಪಂಚಾಯಿತಿಯ ಅನುದಾನದಿಂದ ವಿಕಲಚೇತನರಿಗೆ ಸಹಾಯಧನದ ಚೆಕ್ ಮತ್ತು ಜೀತ ವಿಮುಕ್ತಿಯಾದವರಿಗೆ ನನ್ನ ಗುರುತು ಪ್ರಮಾಣ ಪತ್ರಗಳನ್ನು ಶಾಸಕ ಕೆ.ಎಂ.ಉದಯ್ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಗ್ರಾಪಂ ಅಧ್ಯಕ್ಷೆ ಉಮಾ, ಸದಸ್ಯರಾದ ಮಹೇಶ್, ಮಂಚಶೆಟ್ಟಿ, ಉದುಸ್, ಪವಿತ್ರ, ರಾಜಣ್ಣ, ಚಂದ್ರ, ಮುಖಂಡರಾದ ಮಹೇಶ್, ಸತೀಶ್, ಭೀಮಣ್ಣ, ಕೆ.ಎಂ.ರವಿ, ಪಿಡಿಒ ಶೀಲಾ ಸೇರಿದಂತೆ ಇತರರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ರಾಜ್ಯದಲ್ಲಿ ಅವಧಿ ಮುಕ್ತಾಯಗೊಂಡ ‘ಗ್ರಾಮ ಪಂಚಾಯಿತಿ’ಗಳಿಗೆ ‘ಆಡಳಿತಾಧಿಕಾರಿ’ ನೇಮಿಸಿ ಸರ್ಕಾರ ಆದೇಶ
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








