ಯುಎಸ್ ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಬೆಳ್ಳಿ ಫ್ಯೂಚರ್ಸ್ ಬುಧವಾರ ಪ್ರತಿ ಕೆಜಿಗೆ 12,803 ರೂ.ಗಳ ಏರಿಕೆ ಕಂಡು 2,87,990 ರೂ.ಗೆ ತಲುಪಿದರೆ, ಚಿನ್ನವು 932 ರೂ.ಗಳ ಏರಿಕೆ ಕಂಡು 10 ಗ್ರಾಂಗೆ 1,43,173 ರೂ.ಗೆ ತಲುಪಿದೆ.
ಸತತ ನಾಲ್ಕನೇ ದಿನವೂ ಏರಿಕೆ ದಾಖಲಿಸಿರುವ ಬೆಳ್ಳಿ ಬೆಲೆಯು ಹೊಸ ಇತಿಹಾಸ ಬರೆದಿದೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳ ವಿತರಣೆಯ ಬೆಳ್ಳಿ ದರವು ಪ್ರತಿ ಕೆಜಿಗೆ ₹12,803 (ಶೇ. 4.65) ಹೆಚ್ಚಳವಾಗುವ ಮೂಲಕ ₹2,87,990 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಕಳೆದ ಶುಕ್ರವಾರ ಪ್ರತಿ ಕೆಜಿಗೆ ₹2,52,725 ಇದ್ದ ಬೆಳ್ಳಿ ದರವು, ಕಳೆದ ನಾಲ್ಕು ವಹಿವಾಟು ಅವಧಿಗಳಲ್ಲಿ ಒಟ್ಟು ₹35,265 (ಶೇ. 14) ಏರಿಕೆಯಾಗಿದೆ. 2025ರ ಡಿಸೆಂಬರ್ 31ರಂದು ₹2,35,701 ಇದ್ದ ಬೆಲೆಗೆ ಹೋಲಿಸಿದರೆ, ಈ ವರ್ಷದಲ್ಲಿ ಇದುವರೆಗೆ ಬೆಳ್ಳಿ ಬೆಲೆ ₹52,289 ರಷ್ಟು (ಶೇ. 22.18) ಏರಿಕೆಯಾದಂತಾಗಿದೆ.
ಬಂಗಾರದ ಓಟ:
ಫೆಬ್ರವರಿ ಒಪ್ಪಂದದ ಚಿನ್ನದ ದರವು ಕೂಡ ₹932 (ಶೇ. 0.65) ಏರಿಕೆಯಾಗಿದ್ದು, MCX ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ ₹1,43,173 ತಲುಪುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.
ಬೆಲೆ ಏರಿಕೆಗೆ ಕಾರಣವೇನು?
“ಅಮೆರಿಕದ ಹಣದುಬ್ಬರ ದರ ಇಳಿಕೆಯಾಗಿರುವುದು ಫೆಡರಲ್ ರಿಸರ್ವ್ ಬಡ್ಡಿದರ ಕಡಿತಗೊಳಿಸಬಹುದು ಎಂಬ ನಿರೀಕ್ಷೆಯನ್ನು ಹೆಚ್ಚಿಸಿದೆ. ಇದು ಬುಧವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಭಾರೀ ಏರಿಕೆ ಕಾಣಲು ಕಾರಣವಾಯಿತು,” ಎಂದು ಮೆಹ್ತಾ ಈಕ್ವಿಟೀಸ್ ಲಿಮಿಟೆಡ್‌ನ ಉಪಾಧ್ಯಕ್ಷ ರಾಹುಲ್ ಕಲಂತ್ರಿ ತಿಳಿಸಿದ್ದಾರೆ.
ಜಾಗತಿಕ ಮಾರುಕಟ್ಟೆ:
ಅಂತರಾಷ್ಟ್ರೀಯ ಕಾಮೆಕ್ಸ್ (Comex) ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆಯು ಮೊದಲ ಬಾರಿಗೆ ಪ್ರತಿ ಔನ್ಸ್‌ಗೆ 91 ಡಾಲರ್ ಗಡಿ ದಾಟಿದೆ. ಇನ್ನು ಚಿನ್ನದ ಬೆಲೆಯು ಪ್ರತಿ ಔನ್ಸ್‌ಗೆ 4,636.71 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ರಾಜಕೀಯ ಸಂಘರ್ಷ ಮತ್ತು ಅನಿಶ್ಚಿತತೆ:
ಇರಾನ್‌ನಲ್ಲಿನ ನಾಗರಿಕ ಅಶಾಂತಿ ಮತ್ತು ಹೆಚ್ಚುತ್ತಿರುವ ಜಾಗತಿಕ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯತ್ತ ಮುಖ ಮಾಡಲು ಕಾರಣವಾಗಿದೆ ಎಂದು ಕಲಂತ್ರಿ ವಿವರಿಸಿದ್ದಾರೆ.








