09 ರಿಂದ 14 ವರ್ಷದೊಳಗಿನ ಶಾಲಾ ಹೆಣ್ಣು ಮಕ್ಕಳಿಗೆ ಉಚಿತ ಹ್ಯೂಮನ್ ಪ್ಯಾಪಿಲೋಮ ವೈರಸ್ (ಹೆಚ್ಪಿವಿ) ಲಸಿಕೆಯನ್ನು ಹಾಕುವ ಕುರಿತು ಶಾಲಾ ಮಟ್ಟದಲ್ಲಿ ಇಂದಿನಿAದಲೇ ವ್ಯಾಪಕ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಮಂಗಳವಾರ, ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಹೆಚ್ಪಿವಿ ಲಸಿಕೆ ಕುರಿತು ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಣ್ಣುಮಕ್ಕಳ ಜೀವನದಲ್ಲಿ ಗಂಭೀರತೆಯನ್ನು ಉಂಟುಮಾಡುವ ಜೊತೆ ಜೊತೆಗೆ ಜೀವನ ಪೂರ್ತಿ ಕೊರಗುವಿಕೆಗೆ ಕಾರಣವಾಗುವ ಗರ್ಭಕಂಠದ ಕ್ಯಾನ್ಸರ್ ತಡೆಗೆ ರಾಜ್ಯ ಸರ್ಕಾರ ದಿಟ್ಟಹೆಜ್ಜೆ ಇಟ್ಟಿದ್ದು, ಇದರ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಎಂದರು.
ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಹನುಮಂತಪ್ಪ ಅವರು ಮಾತನಾಡಿ, ಲೈಂಗಿಕ ಪಾಲುದಾರಿಕೆಯು ಗರ್ಭಕಂಠದ ಕ್ಯಾನ್ಸರ್ ಕಾರಣವಾಗಬಹುದಾಗಿದ್ದು, ಈ ಹಿನ್ನಲೆಯಲ್ಲಿ ಆರೋಗ್ಯಕ್ಕೆ ಮಾರಕವಾಗುವುದನ್ನು ತಡೆಯಲು ಹೆಚ್.ಪಿ.ವಿ ಲಸಿಕೆ ಮಹತ್ವಪೂರ್ಣವಾಗಿದೆ. ಮಾರ್ಗಸೂಚಿಯಡಿ 09 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ವಯಸ್ಸಿಗನುಗುಣವಾಗಿ ಉಚಿತವಾಗಿ ಚುಚ್ಚುಮದ್ದು ರೂಪದಲ್ಲಿ ನೀಡುವುದನ್ನು ವ್ಯಾಪಕವಾಗಿ ಶಾಲಾ ಮಟ್ಟದಲ್ಲಿ ಹಾಗೂ ಪಾಲಕರಿಗೂ ಮಾಹಿತಿ ಒದಗಿಸಲು ತಿಳಿಸಿದರು.
ಎಸ್.ಎಮ್.ಒ ಡಾ. ಶ್ರೀಧರ್ ಅವರು ಮಾತನಾಡಿ, ಸೂಕ್ಷö್ಮ ಕ್ರಿಯಾ ಯೋಜನೆ, ಲಸಿಕೆ ಕುರಿತು ಜಾಗೃತಿ, ಸುರಕ್ಷಿತ ಚುಚ್ಚುಮದ್ದು ಅಭ್ಯಾಸ ಕುರಿತು ಮತ್ತು ಲಸಿಕೆಯಿಂದ ಆಗುವ ಪ್ರತಿಕೂಲ ಪರಿಣಾಮಗಳ ನಿರ್ವಹಣೆ ಕುರಿತು ಮತ್ತು ಲಸಿಕೆ ನಂತರ ವರದಿ ಮಾಡುವ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.
ಬಿಎಂಸಿಆರ್ಸಿ ಯ ಪ್ರಸೂತಿ ತಜ್ಞ ಡಾ. ವೀರೇಂದ್ರಕುಮಾರ್ ಅವರು ಗರ್ಭಕಂಠದ ಕ್ಯಾನ್ಸರ್ ಕುರಿತು ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಅಸಾಂಕ್ರಮಿಕ ರೋಗಗಳ ನಿಯಂತ್ರಣ ಅಧಿಕಾರಿ ಡಾ.ವೀರೇಂದ್ರ ಕುಮಾರ್, ತಾಲ್ಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಭರತ್, ಡಾ.ಅರುಣ್ ಕುಮಾರ್, ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ಡಿಎನ್ಒ ಗಿರೀಶ್ ಸೇರಿದಂತೆ ಮಕ್ಕಳ ತಜ್ಞರು, ಪ್ರಸೂತಿ ತಜ್ಞರು, ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.








