ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ‘ಹಿಂದುತ್ವ ಎಂಬುದು ಹಿಂದೂ ಧರ್ಮದ ಭಯಗ್ರಸ್ತ ರೂಪ’ ಎಂದು ಆರೋಪಿಸಿದ ನಂತರ ದೊಡ್ಡ ಮಟ್ಟದ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಕಲ್ಕತ್ತಾ ಕ್ಲಬ್‌ನಲ್ಲಿ ನಡೆದ ‘ಹಿಂದೂ ಧರ್ಮಕ್ಕೆ ಹಿಂದುತ್ವದಿಂದ ರಕ್ಷಣೆ ಬೇಕಿದೆ’ ಎಂಬ ಶೀರ್ಷಿಕೆಯ ಸಂವಾದದಲ್ಲಿ ಮಾತನಾಡಿದ ಅಯ್ಯರ್, ಹಿಂದೂ ಧರ್ಮವು ಒಂದು ಶ್ರೇಷ್ಠ ಧರ್ಮವಾಗಿದ್ದರೆ, ಹಿಂದುತ್ವವು ಒಂದು ರಾಜಕೀಯ ಪ್ರಣಾಳಿಕೆಯಾಗಿದೆ ಎಂದು ಹೇಳಿದ್ದಾರೆ.
“ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರ ಹಿಂದೂ ಧರ್ಮವನ್ನು ‘ಹಿಂದುತ್ವ’ದ ಮೂಲಕ ಉತ್ತೇಜಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು. ಇದು ಬಿಜೆಪಿ ನಾಯಕರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಕೇಸರಿ ಪಡೆಯ ನಾಯಕರು ಅಯ್ಯರ್ ಅವರು ‘ಸನಾತನ ಧರ್ಮ’ಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಲ್ಲದೆ, ಹಿಂದೂಗಳಲ್ಲಿ ಒಡಕು ಮೂಡಿಸಲು ಕಾಂಗ್ರೆಸ್ ಸಂಚು ರೂಪಿಸುತ್ತಿದೆ ಎಂದು ದೂರಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಯ್ಯರ್, “ಶೇಕಡಾ 80ರಷ್ಟಿರುವ ಹಿಂದೂಗಳು ಶೇಕಡಾ 14ರಷ್ಟಿರುವ ಮುಸ್ಲಿಮರ ಮುಂದೆ ನಡುಗಬೇಕು ಎಂದು ಹಿಂದುತ್ವ ಹೇಳುತ್ತದೆ” ಎಂದು ವ್ಯಂಗ್ಯವಾಡಿದರು. ಅಲ್ಲದೆ, ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಹಿಂಸೆಯನ್ನು ಬಳಸುತ್ತಾರೆ ಎಂದು ಆರೋಪಿಸಿದರು. ಎನ್‌ಡಿಟಿವಿ ವರದಿಯ ಪ್ರಕಾರ, “ಹಿಂದುತ್ವ ಎಂಬುದು ಹಿಂದೂ ಧರ್ಮದ ಭಯಗ್ರಸ್ತ (Paranoia) ರೂಪವಾಗಿದೆ. ಇದು 80% ಹಿಂದೂಗಳನ್ನು 14% ಮುಸ್ಲಿಮರ ಮುಂದೆ ಭಯಪಡುವಂತೆ ಮಾಡುತ್ತದೆ. ಚರ್ಚ್‌ನಲ್ಲಿ ಕ್ರಿಸ್‌ಮಸ್ ಭೋಜನದಲ್ಲಿ ಭಾಗವಹಿಸಿದ ಕಾರಣಕ್ಕಾಗಿ, ಅಂಧ ಮತ್ತು ಹಸಿದ ಬುಡಕಟ್ಟು ಹುಡುಗಿಯ ಮೇಲೆ ಬಿಜೆಪಿ ನಾಯಕನೊಬ್ಬ ಹಲ್ಲೆ ಮಾಡುವುದು ಹಿಂದುತ್ವ. ಶಾಪಿಂಗ್ ಮಾಲ್‌ಗಳಿಗೆ ನುಗ್ಗಿ ಕ್ರಿಸ್‌ಮಸ್ ಅಲಂಕಾರಗಳನ್ನು ಹರಿದು ಹಾಕುವುದು ಹಿಂದುತ್ವ” ಎಂದು ಅಯ್ಯರ್ ಹೇಳಿದರು.
“ಹಿಂದೂ ಧರ್ಮವು ಒಂದು ಶ್ರೇಷ್ಠ ಆಧ್ಯಾತ್ಮಿಕ ಧರ್ಮ. ಆದರೆ ಹಿಂದುತ್ವವು ಒಂದು ರಾಜಕೀಯ ಪ್ರಣಾಳಿಕೆ. ಹಿಂದುತ್ವ ಎಂಬುದು 1923ರಲ್ಲಿ ಬಂದಿತು; ಅದಕ್ಕಿಂತ ಸಾವಿರಾರು ವರ್ಷಗಳ ಹಿಂದೆಯೇ ಹಿಂದೂ ಧರ್ಮವು ಅನೇಕ ಸವಾಲುಗಳನ್ನು ಮತ್ತು ಕಷ್ಟಗಳನ್ನು ಎದುರಿಸಿಯೂ ಯಶಸ್ವಿಯಾಗಿ ಉಳಿದುಕೊಂಡಿದೆ. ಅದಕ್ಕೆ ಹಿಂದುತ್ವದ ರಕ್ಷಣೆಯ ಅಗತ್ಯವಿರಲಿಲ್ಲ. ಸಾವರ್ಕರ್ ಅವರ ಹಿಂದುತ್ವದ ಮೂಲಕ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರ ಹಿಂದೂ ಧರ್ಮವನ್ನು ರಕ್ಷಿಸಲು ಅಥವಾ ಉತ್ತೇಜಿಸಲು ಖಂಡಿತ ಸಾಧ್ಯವಿಲ್ಲ” ಎಂದು ಅವರು ತಮ್ಮ ಭಾಷಣದಲ್ಲಿ ಸೇರಿಸಿದರು.








