ಶಿವಮೊಗ್ಗ: ಸಾಗರದಲ್ಲಿ ದಿನೇ ದಿನೇ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಪತ್ರಕರ್ತರೆಂದು ಹೆಸರೇಳಿಕೊಂಡು ವಸೂಲಿಗೆ ಇಳಿದಿದ್ದವರು, ಈಗ ರಾಜ್ಯದ ಪ್ರತಿಷ್ಠಿತ ಪತ್ರಿಕೆಯ ಹೆಸರೇಳಿಕೊಂಡು ವಸೂಲಿಗೆ ಇಳಿದಿದ್ದಾರೆ. ಹೀಗಾಗಿ ಇಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರ ಡಿವೈಎಸ್ಪಿಗೆ ಟೌನ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ಮೂಲಕ ಸಾಗರ ತಾಲ್ಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ದೂರು ನೀಡಲಾಗಿದೆ.
ಈ ವೇಳೆ ಮಾತನಾಡಿದಂತ ಸಾಗರ ಪ್ರಜಾವಾಣಿ ಪತ್ರಿಕೆಯ ವರದಿಗಾರ ಎಂ.ರಾಘವೇಂದ್ರ ಅವರು, ಈ ಹಿಂದೆ ಯೂಟ್ಯೂಬ್ ಹೆಸರು ಹೇಳಿಕೊಂಡು ವಸೂಲಿ ಮಾಡಲಾಗುತ್ತಿತ್ತು. ಈಗ ಪ್ರತಿಷ್ಠಿತ ಪತ್ರಿಕೆಯ ಹೆಸರೇಳಿಕೊಂಡು ಸಾಗರದಲ್ಲಿ ಕೆಲವರು ವಸೂಲಿಗೆ ಇಳಿದಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಸಾಗರ ತಾಲ್ಲೂಕು ಕೆಯುಡಬ್ಲೂಜೆ ಸಂಘದ ಅಧ್ಯಕ್ಷ ಮಹೇಶ್ ಹೆಗಡೆ ಮಾತನಾಡಿ ಈ ಹಿಂದೆ ಯೂಟ್ಯೂಬ್ ವಿರುದ್ಧ ಕ್ರಮಕ್ಕೆ ದೂರು ನೀಡಲಾಗಿತ್ತು. ಅದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಪತ್ರಿಕೆಯ ಹೆಸರೇಳಿಕೊಂಡು ವಸೂಲಿ ಮಾಡುತ್ತಿದ್ದಾರೆ. ಈ ಬಾರಿ ಇಬ್ಬರ ವಿರುದ್ಧ ನೇರವಾಗಿ ಹೆಸರು ಉಲ್ಲೇಖ ಮಾಡಿ ಡಿವೈಎಸ್ಪಿಗೆ ದೂರು ನೀಡಲಾಗಿದೆ. ಪೊಲೀಸರು ಅವರನ್ನು ಕೆರೆಯಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದರು.
ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮನವಿಯಲ್ಲಿ ಏನಿದೆ.?
ಇತ್ತೀಚೆಗೆ ಸಾಗರದಲ್ಲಿ ಕೆಲವರು ತಾವು ಪತ್ರಕರ್ತರು ಎಂದು ಹೇಳಿಕೊಂಡು ರಾಜ್ಯಮಟ್ಟದ ಪತ್ರಿಕೆಗಳು, ಸ್ಥಳೀಯ ಪತ್ರಿಕೆ ಹಾಗೂ ಚಾನಲ್‌ಗಳ ಹೆಸರು ಹೇಳಿಕೊಂಡು ಪ್ರತಿಷ್ಟಿತರ ಬಳಿ ಹೋಗಿ ಹಣ ಹಾಗೂ ದಾನ್ಯ ಇನ್ನಿತರೆಗಳನ್ನು ವಸೂಲಿ ಮಾಡುತ್ತಿದ್ದಾರೆ. ತಾವು ಇಂತಹ ಪತ್ರಿಕೆಯಿಂದ ಬಂದಿದ್ದೇವೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸುವ ದೊಡ್ಡ ಜಾಲವೇ ಸಾಗರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಹಿಂದೆ ಸಂಘದ ವತಿಯಿಂದ ನಕಲಿ ಯೂಟ್ಯೂಬರ್ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಹ ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಈಗ ಪತ್ರಿಕೆಗಳ ಹೆಸರು ಹೇಳಿಕೊಂಡು ಹಣ ವಸೂಲಿ ದಂಧೆಗೆ ಇಳಿದಿದ್ದಾರೆ. ಈಚೆಗೆ ಪ್ರಜಾವಾಣಿ ಪತ್ರಿಕೆ ಸ್ಥಳೀಯ ವರದಿಗಾರ ಎಂದು ಹೇಳಿಕೊಂಡು ಶಿವಮೊಗ್ಗದ ಓರ್ವ ಮಹಿಳಾ ಸರ್ಕಾರಿ ನೌಕರರಿಗೆ ಫೋನ್ ಮಾಡಿ ಹಣ ಕಳಿಸಿ ಎಂದು ಒತ್ತಾಯಿಸಿದ ಘಟನೆ ಸಹ ಸಂಘದ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ನಕಲಿ ಪತ್ರಿಕೆಗಳ ಹೆಸರು ಹೇಳಿಕೊಂಡು ಹಣ ಹಾಗೂ ಧಾನ್ಯ ಇನ್ನಿತರೆ ವಸೂಲಿ ಮಾಡುತ್ತಿರುವ ಹರೀಶ್ ಮೊಗವೀರ ಹಾಹಾಗೂ ರಾಜೇಶ್ ಗಾಂಧಿನಗರ ಅವರ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ.ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಸಂಘದ ಪ್ರಮುಖರಾದ ಜಿ.ನಾಗೇಶ್, ಸದಸ್ಯರಾರ ರವಿ ನಾಯ್ಡು, ಅಖಿಲೇಶ್ ಚಿಪ್ಳಿ, ಲೋಕೇಶ್ ಗುಡಿಗಾರ್, ಗಿರೀಶ್ ರಾಯ್ಕರ್, ವಸಂತ ನೀಚಡಿ, ಬಿ.ಡಿ.ರವಿ ಆನಂದಪುರ, ಸತ್ಯನಾರಾಯಣ, ಮೂರನೆಕಣ್ಣು ನಾಗರಾಜ್, ಜಮೀಲ್ ಸಾಗರ್, ರಫೀಕ್ ಕೊಪ್ಪ, ಮಾಸಾ ನಂಜುಂಡಸ್ವಾಮಿ, ಇಮ್ರಾನ್ ಸಾಗರ್ ಹಾಜರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..








