ಬೆಂಗಳೂರು : ತಲಾ ಆದಾಯದಲ್ಲಿ ನಮ್ಮ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿರಲು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಡಾ.ಬಿ.ಅರ್. ಅಂಬೇಡ್ಕರ್ ವೈದ್ಯಕೀಯ ಮತ್ತು ಆಸ್ಪತ್ರೆ ಸಮೂಹ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆಯಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
“ತ್ಯಾಗ ಮತ್ತು ಮಮತೆಯ ಪ್ರತೀಕ ಎನಿಸಿರುವ ಮಹಿಳೆಯರಿಗೆ ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಆರ್ಥಿಕ ಶಕ್ತಿ ತುಂಬಿದೆ. ಇದರಿಂದಾಗಿಯೇ ತಲಾ ಆದಾಯದಲ್ಲಿ ನಾವು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೇರಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಯೋಜನೆಗಳಿಂದ ಒಂದು ಕುಟುಂಬಕ್ಕೆ ಸುಮಾರು ಐದು ಸಾವಿರದ ಐನೂರು ರೂಪಾಯಿ ಸಂದಾಯ ಆಗಲಿದೆ. ಇದರಿಂದ ಕುಟುಂಬಗಳು ಸಬಲವಾಗುವ ಜತೆಗೆ ರಾಜ್ಯದ ಆರ್ಥಿಕ ವಹಿವಾಟಿನಲ್ಲೂ ಏರಿಕೆ ಕಂಡಿದೆ. ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಿವೆ. ಮುಖ್ಯವಾಗಿ ಜನರ ಖರೀದಿ ಶಕ್ತಿ ಹೆಚ್ಚಿದೆ,”ಎಂದು ಹೇಳಿದರು.
“ಇಂದಿರಾ ಗಾಂಧಿ ಅವರು ಹೇಳಿದಂತೆ ಸರ್ಕಾರವು ಎಲ್ಲರನ್ನೊಳಗೊಳ್ಳುವ ಸರ್ಕಾರವಾಗಬೇಕು. ಸಂಪತ್ತು ಕೇವಲ ಒಂದು ವರ್ಗದ ಸ್ವತ್ತಾಗದೆ, ಸಮರ್ಪಕವಾಗಿ ಹಂಚಿಕೆ ಆಗಬೇಕು. ಹಾಗಿದಾಗ ಮಾತ್ರವೇ ಪ್ರಜಾಪ್ರಭುತ್ವಕ್ಕೆ ಅರ್ಥ ಬರುವುದು,” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಆರಂಭವನ್ನು ವಿವರಿಸಿದ ಇಂಧನ ಸಚಿವರು, “ಪ್ರಜಾಪ್ರಭುತ್ವದ ಉಳಿವಿಗಾಗಿ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು 3200 ಕಿಲೋ ಮೀಟರ್ ಭಾರತ್ ಜೋಡೋ ಪಾದಯಾತ್ರೆ ಕೈಗೊಂಡರು. ಕರ್ನಾಟಕಕ್ಕೆ ಬಂದಾಗ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಜತೆ ಇದ್ದರು. ಪಾದಯಾತ್ರೆ ವೇಳೆ ದೇಶದ ಎಲ್ಲ ಸ್ತರದ ಜನರನ್ನು ಮುಖಾಮುಖಿಯಾಗಿ ಮಾತನಾಡಿಸಿ ಅವರ ಕಷ್ಟ ವಿಚಾರಿಸಿದರು. ಕೋವಿಡ್ ಬಳಿಕ ಕಷ್ಟದಲ್ಲಿರುವ ಜನರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿ ಎಂದು ರಾಹುಲ್ ಗಾಂಧಿ ಅವರು ನಮಗೆ ಹೇಳಿದ್ದರು, ಅದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಪುಟ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಅಶಕ್ತರಿಗೆ ಶಕ್ತಿ ತುಂಬಲಾಗಿದೆ,” ಎಂದರು.
ಕೋವಿಡ್ ಕಾಲದ ಆಪ್ತ ಅಂಬೇಡ್ಕರ್ ಕಾಲೇಜ್
“ಎರಡನೇ ಹಂತದ ಕೋವಿಡ್ ವೇಳೆ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಸಮಸ್ಯೆ ಆಯಿತು. ಆಗ ನಮ್ಮ ಕ್ಷೇತ್ರದಲ್ಲಿರುವ ಅಂಬೇಡ್ಕರ್ ಕಾಲೇಜು ನಮ್ಮ ನೆರವಿಗೆ ನಿಂತು, ಬಡವರಿಗೆ ಆರೋಗ್ಯ ಸೇವೆ ಒದಗಿಸಿತು. ಕಾಲೇಜಿನ ಪ್ರಾಂಶುಪಾಲರು 120 ಹಾಸಿಗೆಗಳ ವಾರ್ಡ್ ಸಿದ್ದ ಮಾಡಿಕೊಟ್ಟರು. ಇದಕ್ಕೆ ಅವರಿಗ ನಾನು ಚಿರಋಣಿಯಾಗಿರುತ್ತೇನೆ,”ಎಂದು ಕೃತಜ್ಞತೆ ಸಲ್ಲಿಸಿದರು.
ಶಿಕ್ಷಣ, ಆರೋಗ್ಯ ಸರ್ವಜ್ಞ ನಗರದ ಅಭಿವೃದ್ದಿ ಗುರಿ
“ಸರ್ವಜ್ಞ ನಗರ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಗುಣಮಟ್ಟದ ಸೇವೆ ಒದಗಸುತ್ತಿರುವ ಅಂಗನವಾಡಿಗಳು, ಶಾಲೆಗಳು ಬಡವರಿಗೆ ವಿಶ್ವಾಸ ಮೂಡಿಸಿವೆ. 120 ಹಾಸಿಗೆಯ ಆಸ್ಪತ್ರೆ ಇನ್ನೆರೆಡು ತಿಂಗಳಲ್ಲಿ ಸಿದ್ದವಾಗಲಿದೆ. ಇದೆಲ್ಲ ಅಂಬೇಡ್ಕರ್ ಅವರ ಸಂವಿಧಾನ ತತ್ತ್ವದ ಆಧಾರದ ಮೇಲೆ ನಡೆಯುತ್ತಿದೆ ಎಂದು ಹೇಳಲು ಸಂತೋಷವಾಗುತ್ತದೆ,” ಎಂದು ತಿಳಿಸಿದರು.








