ಬೆಂಗಳೂರು: ವಿಬಿ ಜಿ ರಾಮ್ ಜಿ ಯೋಜನೆಗೆ ಹಣ ನೀಡಲು ಕೂಡ ಕಾಂಗ್ರೆಸ್ ಬಳಿ ಅನುದಾನವಿಲ್ಲ. ಆ ಮಟ್ಟಿಗೆ ಖಜಾನೆ ಖಾಲಿಯಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಇಷ್ಟು ದಿನ ಮನರೇಗಾ ಅಡಿಯಲ್ಲಿ ಹಣ ಕಳ್ಳತನ ಮಾಡುತ್ತಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿ ಮಾಡಿ ಪಾರದರ್ಶಕತೆ ಹೆಚ್ಚಿಸಿದ್ದಾರೆ. ಈ ಹಿಂದೆ ಪೂರ್ಣ ಅನುದಾನ ಬರುತ್ತಿದ್ದರೆ, ಈಗ 60-40 ರಂತೆ ಅನುದಾನ ಹಂಚಿಕೆ ಮಾಡಬೇಕಿದೆ. ಆದರೆ 40% ಹಣ ನೀಡಲು ಕೂಡ ಕಾಂಗ್ರೆಸ್ ಬಳಿ ಅನುದಾನವಿಲ್ಲ. ಆ ಮಟ್ಟಿಗೆ ಕಾಂಗ್ರೆಸ್ ಸರ್ಕಾರದ ಖಜಾನೆ ಖಾಲಿಯಾಗಿದೆ. ರೈಲು, ಮೆಟ್ರೋ ಸೇರಿದಂತೆ ಅನೇಕ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದೆ. ಅದೇ ರೀತಿ ಈಗ ಪಾಲು ಮಾಡಬಹುದು ಎಂದರು.
ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ 2 ಲಕ್ಷ ಕೋಟಿ ರೂ. ನೀಡಿದ್ದರೆ, ಮೋದಿ ಸರ್ಕಾರದ ಅವಧಿಯಲ್ಲಿ 8 ಲಕ್ಷ ಕೋಟಿ ರೂ. ನೀಡಲಾಗಿದೆ. ಗೃಹ ಲಕ್ಷ್ಮಿ ಯೋಜನೆಗೆ ನೀಡಲು ಹಣ ಇಲ್ಲದಿರುವ ಸನ್ನಿವೇಶದಲ್ಲಿ 40% ಹಣ ನೀಡಬೇಕೆಂದಾಗ ಕಾಂಗ್ರೆಸ್ ನಾಯಕರಿಗೆ ಹಸಿ ಮೆಣಸಿನಕಾಯಿ ತಿಂದಂತಾಗಿದೆ. ಅದಕ್ಕಾಗಿ ಅಧಿವೇಶನ ಕರೆದು ಅನವಶ್ಯಕ ಚರ್ಚೆ ಮಾಡಲಿದ್ದಾರೆ. ಬೇಕಿದ್ದರೆ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಅನುದಾನ ನೀಡಲಿ. ಇಲ್ಲವಾದರೆ ಹೊಸ ಯೋಜನೆ ಒಪ್ಪಿಕೊಳ್ಳಲಿ. ಗ್ಯಾರಂಟಿ ತಂದಾಗ ಇದು ಸಮಸ್ಯೆಯಾಗಲಿದೆ ಎಂದು ತಜ್ಞರು ಹೇಳಿದ್ದರೂ, ಅವುಗಳನ್ನು ಸರ್ಕಾರ ಜಾರಿ ಮಾಡಿತ್ತು ಎಂದರು.
ಹಿಂದಿನ ಬಿಜೆಪಿ ವಿದ್ಯಾನಿಧಿ ಯೋಜನೆ ತಂದಾಗ ನಂತರ ಕಾಂಗ್ರೆಸ್ ಅದನ್ನು ರದ್ದು ಮಾಡಿತ್ತು. ಮಕ್ಕಳಿಗೆ ಸೈಕಲ್ ಕೊಡುವ ಯೋಜನೆಯನ್ನು ರದ್ದು ಮಾಡಿದ್ದರು. ಈಗ ಕೇಂದ್ರ ಸರ್ಕಾರ ಒಳ್ಳೆಯ ಯೋಜನೆ ತಂದರೆ ಅದನ್ನು ವಿರೋಧಿಸಲು ಜನರ ಹಣದಲ್ಲಿ ಅಧಿವೇಶನ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಲೀಸ್ ಆಧಾರದಲ್ಲಿ ಕೆಲಸ ಮಾಡುತ್ತಿದೆ. ವೇಣುಗೋಪಾಲ್ ಅವರು ಸೂಪರ್ ಸಿಎಂ ಆಗಿದ್ದಾರೆ. ಅವರು ಹೇಳಿದಂತೆ ಈ ಸರ್ಕಾರ ಕೆಲಸ ಮಾಡುತ್ತಿದೆ. ಈ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಕೋಗಿಲು ಕ್ರಾಸ್ ವಿಚಾರ ಬಂದಾಗ ಕಾಂಗ್ರೆಸ್ ನ ಕೋಗಿಲೆ ಕೂಗಿತ್ತು. ಆದರೆ ಕೇರಳದಲ್ಲಿ ಕನ್ನಡ ಉಳಿಸುವ ವಿಚಾರ ಬಂದಾಗ ಕೋಗಿಲೆ ಮೌನವಾಗಿದೆ. ಆದ್ದರಿಂದ ವೇಣುಗೋಪಾಲ್ ಅವರು ಕಾಗೆಯೇ ಹೊರತು ಕೋಗಿಲೆಯಲ್ಲ. ಇವರಿಗೆ ಎಲ್ಲ ಚುನಾವಣೆಗೆ ಕರ್ನಾಟಕದ ಹಣ ಬೇಕಿದೆ. ಕನ್ನಡದ ವಿಚಾರ ಬಂದಾಗ ಇವರು ಬೆಂಬಲಿಸುವುದಿಲ್ಲ ಎಂದರು.








