ಬೆಂಗಳೂರು: ನೊಂದವರಿಗೆ ನ್ಯಾಯ ಒದಗಿಸಲು ವಿಳಂಬವಾಗುತ್ತಿರುವ ಬಗ್ಗೆ ಚರ್ಚಿಸಿ, ಬದಲಾವಣೆಗಳನ್ನು ಕಂಡುಕೊಳ್ಳಬೇಕಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಅಭಿಯೋಜನಾಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕೆಇಬಿ ಇಂಜಿನಿಯರ್ ಅಸೋಸಿಯೇಷನ್ ರಜತ ಮಹೋತ್ಸವ ಕಟ್ಟಡದ ಸಭಾಂಗಣದಲ್ಲಿ ಆಯೋಜಿಸಿದ್ದ ‘ತರಬೇತಿ ಕಾರ್ಯಾಗಾರ ಮತ್ತು 17ನೇ ರಾಜ್ಯಮಟ್ಟದ ಸಮ್ಮೇಳನದ ಉದ್ಘಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಭಾಗವಹಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ಕರ್ನಾಟಕದ ನ್ಯಾಯಾಲಯಗಳಲ್ಲಿ 20 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಹೈಕೋರ್ಟ್‌ನಲ್ಲಿ ಸುಮಾರು 3 ಲಕ್ಷ ಪ್ರಕರಣಗಳು, ಕೆಳಹಂತದ ನ್ಯಾಯಾಲಯಗಳಲ್ಲಿ 17 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಇವು ಬರೀ ಒಂದೆರಡು ವರ್ಷದ ಪ್ರಕರಣಗಳಲ್ಲ. ಹಲವು ವರ್ಷಗಳಿಂದ ಬಾಕಿ ಉಳಿದಿವೆ. ಬಡವನಿಗೆ ನ್ಯಾಯ ಒದಗಿಸಲು ಎಷ್ಟು ವರ್ಷ ತೆಗೆದುಕೊಳ್ಳುತ್ತಿದ್ದೇವೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ ಎಂದರು.
ವಿಶ್ವ ಮಟ್ಟದಲ್ಲಿ ಭಾರತವು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಬಹಳಷ್ಟು ಪ್ರಗತಿ ಕಂಡಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಅಷ್ಟೇ ವೇಗವಾಗಿ ಬದಲಾವಣೆಗಳು ಆಗಬೇಕಲ್ಲವೇ? ವರ್ಷಾನುಗಟ್ಟಲೆ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಇದಕ್ಕೆ ಟೈಮ್ ಫ್ರೇಮ್ ಇದ್ದರೆ, ನೊಂದವರಿಗೆ ನ್ಯಾಯ ಒದಗಿಸುವುದಕ್ಕೆ ಅರ್ಥ ಬರುತ್ತದೆ.
ಹೊಸದಾಗಿ ಅನೇಕ ಕಾನೂನುಗಳು, ಆವಿಷ್ಕಾರಗಳು ಬಂದಿವೆ. ಸೈಬರ್ ಕ್ರೈಂ, ಎಲೆಕ್ಟ್ರಾನಿಕ್ ಸಾಕ್ಷ್ಯ, ಬಿಎನ್‌ಎಸ್ ಮುಂತಾದ ಹೊಸ ಕಾನೂನುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದಿದ್ದರೆ ನಾವು ನ್ಯಾಯ ಒದಗಿಸುವುದರಲ್ಲಿ ವಿಫಲರಾಗುತ್ತೇವೆ. ಅದಕ್ಕಾಗಿ ತರಬೇತಿಯ ಅಗತ್ಯತೆ ಇದೆ. ತರಬೇತಿ ಕಾರ್ಯಾಗಾರವನ್ನು ಪ್ರತಿವರ್ಷ ಹಮ್ಮಿಕೊಳ್ಳಬೇಕು. ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಹೇಳಿದರು.
ಅನೇಕ ಸಂದರ್ಭಗಳಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಸರಿಯಾದ ರೀತಿಯಲ್ಲಿ ಅಭಿಯೋಜಕರಿಗೆ ಸ್ಪಂದಿಸುವುದಿಲ್ಲ ಎಂಬ ಮಾತುಗಳಿವೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಈ ಬಗ್ಗೆ ಗಮನ ಹರಿಸಬೇಕು ಎಂದರು.
ದೊಡ್ಡ ಮಟ್ಟದ ಪ್ರಕರಣಗಳಲ್ಲಿ ಅಕ್ರಮ ಮಾಡಿರುವವರು ತಪ್ಪಿಸಿಕೊಳ್ಳುವಂಥ ಅವಕಾಶಗಳಿವೆ. ಇಂತಹ ಲೋಪಗಳನ್ನು ಯಾವಾಗ ಸರಿಪಡಿಸುವುದು. ಒಂದುವೇಳೆ ಸರಿಪಡಿಸದೇ ಹೋದರೆ ನಮ್ಮ ಕಾನೂನುಗಳು ಏನಾಗುತ್ತವೆ. ಈ ಬಗ್ಗೆ ನಾವೇ ಪ್ರಶ್ನಿಸಿಕೊಳ್ಳಬೇಕಿದೆ.
ಒಟ್ಟು 910 ಸರ್ಕಾರಿ ಅಭಿಯೋಜಕರ ಹುದ್ದೆಗಳ 400 ಹುದ್ದೆಗಳು ಕಾಲಿ ಇವೆ. ಆದಷ್ಟು ಬೇಗ ಭರ್ತಿ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ.ಪಾಟೀಲ್ ರವರು, ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ರವರು, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಾದ ಅಂಜಲಿದೇವಿ, ಸಂಘದ ಅಧ್ಯಕ್ಷರಾದ ಅಶ್ವಥ್ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.








