ಬೆಂಗಳೂರು: ನಮ್ಮ ಮೆಟ್ರೋ ಕಾಳೆನ ಅಗ್ರಹಾರದಿಂದ ತಾವರೆಕೆರೆಯವರೆಗೆ ಇರುವ ಗುಲಾಬಿ ಮಾರ್ಗದಲ್ಲಿ (ಸುಮಾರು 7.5 ಕಿಮೀ ಉದ್ದ) ರೋಲಿಂಗ್ ಸ್ಟಾಕ್ ಪರೀಕ್ಷೆಗಳನ್ನು ದಿನಾಂಕ 11ನೇ ಜನವರಿ 2026 ರಿಂದ ಆರಂಭಿಸಿ ಏಪ್ರಿಲ್ 2026ರ ಮಧ್ಯಭಾಗದೊಳಗೆ ನಿಗಮವು ಪೂರ್ಣಗೊಳಿಸುವ ಯೋಜನೆ ಹೊಂದಿದೆ.
ಈ ಮುಖ್ಯ ಪರೀಕ್ಷೆಗಳು (Main Line Testing) ವಾಣಿಜ್ಯ ಸಂಚಾರ ಮಾಡುವ ಮೊದಲು ಕೈಗೊಳ್ಳಲಾಗುವ ಅತ್ಯಂತ ಮಹತ್ವದ ಚಟುವಟಿಕೆಯಾಗಿದ್ದು, ನೈಜ ಕ್ಷೇತ್ರ ಪರಿಸ್ಥಿತಿಗಳಲ್ಲಿ ರೈಲುಗಳ ಕಾರ್ಯಕ್ಷಮತೆ ಹಾಗೂ ವ್ಯವಸ್ಥೆಗಳ ಪರಸ್ಪರ ಸಂಯೋಜನೆಯ ಸಮಗ್ರ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಶಾಸನಬದ್ಧ ಅನುಮೋದನೆಗಳನ್ನು ಪಡೆಯಲು ಈ ಪರೀಕ್ಷೆಗಳು ಅಗತ್ಯವಾಗಿದೆ.
ಮೇಲ್ಕಂಡ ಅವಧಿಯಲ್ಲಿ ಟ್ರಾಕ್ಷನ್ ಮತ್ತು ಬ್ರೇಕ್, ಆಸಿಲೇಷನ್ (Oscillation), ಸಿಗ್ನಲಿಂಗ್, ವಿದ್ಯುತ್ ಮತ್ತು ದೂರಸಂಪರ್ಕ ವ್ಯವಸ್ಥೆಗಳೊಂದಿಗೆ ಏಕೀಕರಣ (Integration) ಸೇರಿದಂತೆ ಹಲವು ಪರೀಕ್ಷೆಗಳು ನಡೆಸಲಾಗುತ್ತವೆ.
ಇದು ಗುಲಾಬಿ ಮಾರ್ಗದಲ್ಲಿನ ಯೋಜನೆಯ ಮಹತ್ವದ ಮೈಲಿಗಲ್ಲಿನತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. ಸಾರ್ವಜನಿಕ ಸೇವೆಗೆ ಸದರಿ ಮಾರ್ಗ ತೆರೆಯುವ ಮೊದಲು ಅತ್ಯುನ್ನತ ಮಟ್ಟದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಬಿಎಂಆರ್‌ಸಿಎಲ್ ಸದಾ ಬದ್ಧವಾಗಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.








