ಬೆಂಗಳೂರು : ಇಂದು ರಾಕಿಂಗ್ ಸ್ಟಾರ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ, ಈ ಹಿನ್ನೆಲೆಯಲ್ಲಿ ನಟ ಯಶ್ ತಮ್ಮ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಯಶ್, ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ…ನೀವು ಕೊಟ್ಟ ಪ್ರೀತಿ, ತೋರಿದ ಅಭಿಮಾನದಿಂದ ಇಲ್ಲಿಯವರೆಗೆ ಬಂದಿದ್ದೇನೆ. ನಿಮ್ಮ ಮುಗಿಲೆತ್ತರದ ನಿರೀಕ್ಷೆಯನ್ನ ನಿಜವಾಗಿಸುವ ಕೆಲಸದಲ್ಲಿ ನಾನಿದ್ದೇನೆ.ನೀವು ಈಗಾಗಲೇ ಸಂಭ್ರಮಿಸುತ್ತಿರುವುದು ಬಿಡುವಿಲ್ಲದ ಕೆಲಸದ ನಡುವೆ ಜನ್ಮದಿನವನ್ನು ನೆನಪಿಸಿದೆ. ಸಿನಿಮಾದ ಕೆಲಸ ಕೊನೆ ಹಂತದಲ್ಲಿರುವ ಕಾರಣ ನಿಮ್ಮೊಂದಿಗೆ ಇರಲು ಸಾಧ್ಯವಾಗುತ್ತಿಲ್ಲ.
ನಿಮ್ಮ ನಿಷ್ಕಲ್ಮಶ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಋಣಿ. ಜನ್ಮದಿನದ ಸಂಭ್ರಮದಲ್ಲಿ ನನ್ನ ಮನಸ್ಸಿಗೆ ಸಂಕಟ ತರುವ ಕೆಲಸ ಅಭಿಮಾನಿಗಳಿಂದಾಗುವುದಿಲ್ಲ ಎಂಬ ನಂಬಿಕೆ ನನ್ನದು. ಮಾರ್ಚ್ 19 ಎಲ್ಲರೂ ಸೇರಿ ಸಂಭ್ರಮಿಸೋಣ. ನಿಮಗೆ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.
ಇಂದು ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಈ ವಿಶೇಷ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಚಿತ್ರತಂಡ ‘ಟಾಕ್ಸಿಕ್’ ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ನಿರ್ಧರಿಸಿದೆ. ಈಗಾಗಲೇ ಚಿತ್ರದ ಪೋಸ್ಟರ್ಗಳು ಹಾಗೂ ಲುಕ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಸರ್ ಕುರಿತು ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.









