ಪಾಕಿಸ್ತಾನ: ತನ್ನ ಮೂವರು ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರೇಮಿಯನ್ನು ಬಂಧಿಸಲಾಗಿದೆ. ಲಾಹೋರ್ ನಿಂದ 200 ಕಿ.ಮೀ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಗುಜರಾತ್ ಜಿಲ್ಲೆಯ ಸರಾಯ್ ಆಲಂಗೀರ್ ನಲ್ಲಿ ಈ ಹತ್ಯೆ ನಡೆದಿದೆ.
ಮೂರರಿಂದ ಏಳು ವರ್ಷದೊಳಗಿನ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನಿಗೆ ನಿದ್ರೆ ಮಾತ್ರೆ ನೀಡಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಮಹಿಳೆಯನ್ನು ಸಿದ್ರಾ ಬಶೀರ್ ಮತ್ತು ಆಕೆಯ ಸಹಚರನನ್ನು ಬಾಬರ್ ಹುಸೇನ್ ಎಂದು ಪೊಲೀಸರು ಗುರುತಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಇಬ್ಬರೂ ಸುಮಾರು ಒಂದೂವರೆ ವರ್ಷದ ಹಿಂದೆ ವೀಡಿಯೊ ಹಂಚಿಕೆ ವೇದಿಕೆಯಲ್ಲಿ ಭೇಟಿಯಾದರು ಮತ್ತು ನಂತರ ಮದುವೆಯಾಗಲು ನಿರ್ಧರಿಸಿದರು.
“ಅವರು ಮದುವೆಯಾಗಲು ಯೋಜಿಸಿದಾಗ, ಮಹಿಳೆ ಪದೇ ಪದೇ ತನ್ನ ಪತಿಯನ್ನು ವಿಚ್ಛೇದನಕ್ಕಾಗಿ ಕೇಳಿದಳು ಮತ್ತು ಆಗಾಗ್ಗೆ ಆತನೊಂದಿಗೆ ಜಗಳವಾಡುತ್ತಿದ್ದಳು” ಎಂದು ಪೊಲೀಸ್ ಅಧಿಕಾರಿ ಒಮರ್ ಫಾರೂಕ್ ಹೇಳಿದ್ದಾರೆ.
ಮಕ್ಕಳು ಜೀವಂತವಾಗಿರುವಾಗ ಮದುವೆಯಾಗಲು ಸಾಧ್ಯವಿಲ್ಲ ಎಂದು ಈ ಜೋಡಿ ನಂಬಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಸಿದ್ರಾ ತಾನು ಮತ್ತು ಹುಸೇನ್ ಆ ಕಾರಣಕ್ಕಾಗಿ ಮಕ್ಕಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಪೊಲೀಸರ ಪ್ರಕಾರ, ಶಂಕಿತರು ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಹಣ್ಣಿನ ಚಾಟ್ ನಲ್ಲಿ ಬೆರೆಸಿ ಮಕ್ಕಳಿಗೆ ನೀಡಿದರು. ಮಕ್ಕಳು ಗಾಢ ನಿದ್ರೆಗೆ ಜಾರಿದ ನಂತರ, ಅವರನ್ನು ಒಬ್ಬೊಬ್ಬರಾಗಿ ಕತ್ತು ಹಿಸುಕಿ ಕೊಲ್ಲಲಾಯಿತು.








