ಬೆಂಗಳೂರು : 2025-26ನೇ ಸಾಲಿನ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ-1ರ ವೇಳಾಪಟ್ಟಿ ಮತ್ತು ಮಾರ್ಗಸೂಚಿಯನ್ವಯ ಪರೀಕ್ಷೆಯನ್ನು ನಡೆಸುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಹತ್ವದ ಆದೇಶ ಹೊರಡಿಸಿದೆ.
2025-263 ಸಾಲಿನ ಎಸ್.ಎಸ್.ಎಲ್.ಸಿ ಪೂರ್ವಸಿದ್ಧತಾ ಪರೀಕ್ಷೆ-1ನ್ನು 05.01.2026 ರಿಂದ 10.01.2026 ರವರೆಗೆ ನಡೆಸಲು ತೀರ್ಮಾನಿಸಲಾಗಿದ್ದು, ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಪೂರ್ವ ಸಿದ್ದತಾ ಪರೀಕ್ಷೆಗೆ ಮುಖ್ಯ ಪರೀಕ್ಷೆಯ ಮಾದರಿಯಂತೆ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ, ಅಯಾ ದಿನದ ಪ್ರಶ್ನೆಪತ್ರಿಕೆಯನ್ನು ವೇಳಾಪಟ್ಟಿಯಂತೆ ವಿಷಯವಾರು ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ದಿನದಂದು ಪೂರ್ವಾಹ್ನ 07.00 ಗಂಟೆಗೆ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಸಂಬಂಧಿಸಿದ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಪ್ರಶ್ನೆಪತ್ರಿಕೆಯನ್ನು ಮುದ್ರಿಸಿಕೊಂಡು ಪೂರ್ವ ಸಿದ್ಧತಾ ಪರೀಕ್ಷೆಯನ್ನು ನಡೆಸಲು ಅಗತ್ಯ ಕ್ರಮವಹಿಸುವುದು.
ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ದಿಕ್ಕೂಚಿಯಾಗಿರುತ್ತದೆ. ಆದ್ದರಿಂದ ಪೂರ್ವಸಿದ್ಧತಾ ಪರೀಕ್ಷೆಯನ್ನು ಮುಖ್ಯ ಪರೀಕ್ಷೆಯನ್ನು ನಡೆಸುವ ರೀತಿಯಲ್ಲಿಯೇ ಶಿಸ್ತುಬದ್ಧವಾಗಿ, ಹಾಗೂ ಪಾರದರ್ಶಕವಾಗಿ ನಡೆಸಲು, ಜಿಲ್ಲಾ ಉಪನಿರ್ದೇಶಕರು (ಆಡಳಿತ)ರವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಶಾಲಾ ಮುಖ್ಯಶಿಕ್ಷಕರುಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವುದು.
ಪರೀಕ್ಷೆ ನಡೆದ ಮರುದಿನ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶ ಮತ್ತು ಕಲಿಕೆಯ ಕೊರತೆಯನ್ನು ವಿದ್ಯಾರ್ಥಿ ಮತ್ತು ಪೋಷಕರ ಗಮನಕ್ಕೆ ತರುವುದು. ನಂತರದ ಉಳಿದ ದಿನಗಳಲ್ಲಿ ವಿದ್ಯಾರ್ಥಿಯು ಕಲಿಯದೇ ಇರುವ ಅಂಶಗಳ ಬಗ್ಗೆ ಕಲಿಕೆಯಾಗುವಂತೆ ಅಗತ್ಯ ಕ್ರಮವಹಿಸುವುದು. ಪ್ರಸ್ತುತ ವಾರ್ಷಿಕವಾಗಿ ಮೂರು ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಸದರಿ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಫಲಿತಾಂಶದ ಸುಧಾರಣೆಗೆ ಅಗತ್ಯಕಮ ಕೈಗೊಳ್ಳುವುದು.









