ಮಂಡ್ಯ: ಮಂಡ್ಯ ತಾಲ್ಲೂಕಿನ ಇಂಡುವಾಳು ಗ್ರಾ.ಪಂ. ನಲ್ಲಿ ನಡೆದ ಕಡತ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಾದ್ಯಂತ ಗ್ರಾ.ಪಂ.ಗಳಲ್ಲಿ ಸುಸಜ್ಜಿತ ಅಭಿಲೇಖಾಲಯ ನಿರ್ವಹಣೆ ಮಾಡುವಂತೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಅಭಿಯಾನದ ಫಲವಾಗಿ ಈವರೆಗೆ 129 ಗ್ರಾಮ ಪಂಚಾಯತ್ ಗಳಲ್ಲಿ ಅಭಿಲೇಖಾಲಯವನ್ನು ಸುಸಜ್ಜಿತವಾಗಿ ಸಜ್ಜುಗೊಳಿಸಲಾಗಿದ್ದು ಸದರಿ ಗ್ರಾ.ಪಂ.ಗಳನ್ನು ಮಂಡ್ಯ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಅಭಿನಂದಿಸಿದರು.
ಶುಕ್ರವಾರ ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಡಿಯೋ ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಉತ್ತಮವಾಗಿ ಅಭಿಲೇಖಾಲಯ ಸಜ್ಜುಗೊಳಿಸಿ ದಾಖಲೆಗಳನ್ನು ಸೂಕ್ತವಾಗಿ ನಿರ್ವಹಿಸುವ ಗ್ರಾ.ಪಂ. ಮತ್ತು ತಾಲ್ಲೂಕು ಪಂಚಾಯತ್ ಗಳಿಗೆ ಜನವರಿ 10ರಂದು ನಡೆಯುವ ಪಂಚಾಯತ್ ರಾಜ್ ಉತ್ಸವದಂದು ಅಭಿನಂದಿಸಲಾಗುವುದು ಎಂದು ತಿಳಿಸಿದರು.
ಹೊಸದಾಗಿ ಜಾರಿಗೆ ತರಲಾಗಿರುವ ಇ-ಸ್ವತ್ತು ತಂತ್ರಾಂಶದಲ್ಲಿ ಕೋರಲಾಗುವ ದಾಖಲಾತಿಗಳನ್ನು ಪೂರ್ವಭಾವಿಯಾಗಿ ಸಂಗ್ರಹಿಸಲು, ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ನಿಗಧಿತ ಸಮಯದೊಳಗೆ ಒದಗಿಸಲು ಅಭಿಲೇಖಾಲಯ ಅಗತ್ಯವಿದ್ದು, ಎಲ್ಲಾ ಗ್ರಾಮ ಪಂಚಾಯತ್ ಗಳು ಜನವರಿ 31ರೊಳಗೆ ಅಭಿಲೇಖಾಲಯ ಸಜ್ಜುಗೊಳಿಸುವಂತೆ ಸೂಚಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ 2026-27ನೇ ಸಾಲಿನ ಕ್ರಿಯಾಯೋಜನೆ ಜನವರಿ 15ರೊಳಗೆ ಸಿದ್ದಪಡಿಸಿ ಸಲ್ಲಿಸಬೇಕಾಗಿದ್ದು, ಉಪಕಾರ್ಯದರ್ಶಿ (ಅಭಿವೃದ್ಧಿ) ಸೇರಿದಂತೆ ನರೇಗಾ ಯೋಜನೆಗೆ ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ, ಗ್ರಾ.ಪಂ. ಹಂತದಲ್ಲಿಯೇ ನಿಯಮಾನುಸಾರ ಹಾಗೂ ಯೋಜನೆಯ ಮಾರ್ಗಸೂಚಿಯನುಸಾರ ಸಿದ್ದಪಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.
ನರೇಗಾ ಯೋಜನೆಯಡಿ ಬಿಡುಗಡೆಯಾಗಿರುವ ವೈಯುಕ್ತಿಕ ಕಾಮಗಾರಿಗಳ ಸಾಮಗ್ರಿ ಮೊತ್ತದ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಲು ಕ್ರಮವಹಿಸಬೇಕು, ಯಾವುದೇ ಅನುದಾನವನ್ನು ವ್ಯಪಗತವಾಗದಂತೆ ಫಲಾನುಭವಿಗಳಿಗೆ ನಿಯಮಾನುಸಾರ ಪಾವತಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡಲಾಗಿರುವ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಲು ಅಗತ್ಯ ಕ್ರಮವಹಿಸುವಂತೆ ಹಾಗೂ 2025-26ನೇ ಸಾಲಿನ ಎಂಪಿಕ್ ಗುರಿಗೆ ಅನುಗುಣವಾಗಿ ಶೇಕಡ 100ರಷ್ಟು ಪ್ರಗತಿ ಸಾಧಿಸುವಂತೆ ಸೂಚಿಸಲಾಗಿದೆ. ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ ಮನೆಗಳನ್ನು ಪೂರ್ಣಗೊಳಿಸಲು ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿ ಬಾಕಿ ಉಳಿದಿರುವ ಅನುದಾನವನ್ನು ನಿಮಾನುಸಾರ ವೆಚ್ಚ ಭರಿಸುವಂತೆ ಗ್ರಾ.ಪಂ. ಪಿಡಿಓ ಗಳು ಹಾಗೂ ತಾ.ಪಂ. ಇಓ ಗಳಿಗೆ ಸೂಚಿಸಲಾಗಿದೆ. ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು, ಸದರಿ ಸಮಸ್ಯೆಗಳ ಬಗ್ಗೆ ಈಗಾಗಲೇ ರಾಜ್ಯ ಕಚೇರಿಗೆ ಮಾಹಿತಿ ನೀಡಲಾಗಿದ್ದು, ಸಮಸ್ಯೆ ಪರಿಹರಿಸಲು ಅನುಸರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ತೆರಿಗೆ ವಸೂಲಾತಿಯ ಪ್ರಗತಿಯನ್ನು ಹೆಚ್ಚಿಸಲು ಎಲ್ಲಾ ತಾ.ಪಂ. ಗಳಿಗೆ ಗುರಿ ನಿಗಧಿಗೊಳಿಸಲಾಗಿದ್ದು, 10 ದಿನಗಳ ನಂತರ ಮತ್ತೊಮ್ಮೆ ಈ ಬಗ್ಗೆ ಪರಿಶೀಲನೆ ನಡೆಸಿ ನಿಗಧಿಗೊಳಿಸಲಾಗಿರುವ ಗುರಿಗೆ ಅನುಗುಣವಾಗಿ ಪ್ರಗತಿಯಾಗಿರುವ ಬಗ್ಗೆ ಪರಿಶೀಲಿಸಲಾಗುವುದು. ಆದ್ದರಿಂದ ಮುಂದಿನ 10 ದಿನದಲ್ಲಿ ನಿರೀಕ್ಷಿತ ಗುರಿಯನ್ನು ಸಾಧಿಸಲು ಕ್ರಮವಹಿಸುವಂತೆ ಸೂಚಿಸಿದರು.
ಬಿಕ್ಷುಕರ ಕರ ಮತ್ತು ಗ್ರಂಥಾಲಯ ಕರ ಪಾವತಿ:
ಸರ್ಕಾರದ ನಿರ್ದೇಶನದಂತೆ ಗ್ರಾ.ಪಂ.ಗಳು ಬಿಕ್ಷುಕರ ಕರ ಮತ್ತು ಗ್ರಂಥಾಲಯ ಕರವನ್ನು ಪಾವತಿಸಬೇಕಾಗಿದ್ದು, ಹಿಂದಿನ ಸಾಲುಗಳ ಆಡಿಟ್ ವರದಿಗಳನ್ನು ಪರಿಶೀಲಿಸಿ ಪಾವತಿಸಬೇಕಾಗಿರುವ ಶೇಕಡವಾರು ಮೊತ್ತಕ್ಕೆ ಅನುಗುಣವಾಗಿ ಬಿಕ್ಷುಕರ ಕರ ಮತ್ತು ಗ್ರಂಥಾಲಯ ಕರವನ್ನು ಪಾವತಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ರಗತಿ:
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಾಣ ಮಾಡಿಕೊಂಡಿರುವ ಫಲಾನುಭವಿಗಳ ವಿವರವನ್ನು ಐಎಂಐಎಸ್ ನಲ್ಲಿ ದಾಖಲಿಸಿ ನಂತರ ಜಿಯೋ ಟ್ಯಾಗ್ ಮಾಡಲು ಕ್ರಮವಹಿಸುವಂತೆ ಸಂಬಂಧಪಟ್ಟ ಪಿಡಿಓಗಳಗೆ ಸೂಚಿಸುವಂತೆ ತಿಳಿಸಲಾಗಿದೆ ಹಾಗೂ ಬೂದು ನೀರು ನಿರ್ವಹಣಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುದಾನ ಬೇಡಿಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ ಎಂದು ತಿಳಿಸಿದರು.
ಗ್ರಾ.ಪಂ. ಮಟ್ಟದ ಸಂಜೀವಿನಿ ಒಕ್ಕೂಟಗಳ ಲೆಕ್ಕ ಪರಿಶೋಧನೆ ಪೂರ್ಣಗೊಳಿಸಲು ಸೂಚನೆ:
ಎನ್.ಆರ್.ಎಲ್. ಎಂ. ಯೋಜನೆಯಡಿ ರಚಸಲಾಗಿರುವ ಗ್ರಾ.ಪಂ. ಮಟ್ಟದ ಸಂಜೀವಿನಿ ಒಕ್ಕೂಟಗಳಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವು ಉದ್ದೇಶಿತ ಚಟುವಟಿಕೆಗಳಿಗೆ ಬಳಕೆಯಾಗಿರುವ ಬಗ್ಗೆ ಸರ್ಕಾರದ ನಿರ್ದೇಶನದಂತೆ ಲೆಕ್ಕ ಪರಿಶೋಧನೆಯನ್ನು ನಡೆಸಿ ವರದಿ ಸಲ್ಲಿಸಬೇಕು ಹಾಗೂ ವಾರ್ಷಿಕ ಮಹಾ ಸಭೆಗಳನ್ನು ನಡೆಸಬೇಕು ಎಂದು ಸೂಚಿಸಲಾಗಿದೆ ಎಂದರು.
2025-26ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಅನಿರ್ಬಂಧಿತ ಅನುದಾನದ ಕಾಮಗಾರಿಗಳನ್ನು ಫೆಬ್ರವರಿ-2026 ರೊಳಗೆ ಮುಕ್ತಾಯಗೊಳಿಸಿ ಅನುದಾನ ವ್ಯಪಗತವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದ್ದು, ಅನುದಾನ ವ್ಯಪಗತಕ್ಕೆ ಸಂಬಂಧಪಟ್ಟವರನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ, ಸಹಾಯಕ ಕಾರ್ಯದರ್ಶಿ (ಆಡಳಿತ) ರವೀಂದ್ರ, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಚಂದ್ರು, ಸಹಾಯಕ ಯೋಜನಾಧಿಕಾರಿ ಶ್ರೀಹರ್ಷ, ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರುಗಳು ಮತ್ತು ಪಿಡಿಓ ಗಳು ಹಾಜರಿದ್ದರು.
ಮಂಡ್ಯ ನಗರದ ವಾಹನದಟ್ಟಣೆ ಕುರಿತು ವರದಿ ಸಿದ್ಧಪಡಿಸಲು ಸೂಚನೆ: DC ಡಾ.ಕುಮಾರ








