ಮಂಡ್ಯ: ನಗರದಲ್ಲಿ ಹೆಚ್ಚಿನ ವಾಹನದಟ್ಟಣೆ ಇರುವುದರಿಂದ ಮಂಡ್ಯ ದಕ್ಷಿಣ ಭಾಗಕ್ಕೆ ಬೈ ಪಾಸ್ ರಿಂಗ್ ರೋಡ್ ಪ್ರಸ್ತಾವನೆ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ವಾಹನ ದಟ್ಟಣೆಯ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಎಫ್.ಪಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ರಿಂಗ್ ರೋಡ್ ಸಂಬಂಧ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಎಫ್.ಪಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸಂಸ್ಥೆಯವರು ನಗರದಲ್ಲಿ 5 ಕಡೆ ಸಿ.ಸಿ.ಟಿ.ವಿ ಅಳವಡಿಸಿ ಪ್ರತಿ ನಿತ್ಯ ನಗರದಲ್ಲಿ ಸಂಚರಿಸುವ ವಾಹನಗಳ ದಟ್ಟಣೆಯ ಕುರಿತು ಮಾಹಿತಿ ಮತ್ತು ಅಂಕಿಅಂಶಗಳನ್ನು ಸಂಗ್ರಹಿಸಿರುತ್ತಾರೆ ಎಂದು ತಿಳಿಸಿದರು.
ನಗರದಲ್ಲಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ರಿಂಗ್ ರೋಡ್ ನಿರ್ಮಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದರಿ ವಾಹನ ದಟ್ಟಣೆ ವರದಿಗೆ ಅನುಮೋದನೆ ದೊರೆತ ಕೂಡಲೇ ವಿಸ್ತೃತ ಯೋಜನಾ ವರದಿಯನ್ನು ತಯಾರಿಸಲು ಸೂಚಿಸಿದರು.
ವಾಹನ ದಟ್ಟಣೆ ವರದಿ ಅನುಮೋದನೆಗೊಂಡ ನಂತರ ಡಿ.ಪಿ.ಆರ್ ಸಿದ್ಧಪಡಿಸಿ. ರಿಂಗ್ ರೋಡ್ ನಿರ್ಮಿಸಿದ ಪಕ್ಷದಲ್ಲಿ ಶೇಕಡ ಎಷ್ಟು ಪ್ರಮಾಣದಲ್ಲಿ ನಗರದ ಟ್ರಾಫಿಕ್ ಕಂಟ್ರೋಲ್ ಆಗಲಿದೆ ಹಾಗೂ ರಸ್ತೆಯ ಉದ್ದ ಅಗಲದ ಕುರಿತು ಮಾಹಿತಿ ಸಂಗ್ರಹ ಮಾಡಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಿ ಎಂದು ಹೇಳಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಕೃಷ್ಣ ಕುಮಾರ್, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.








