ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಅನ್ನು ಅಧಿಸೂಚಿಸಲಾಗಿದ್ದು, ಈ ನಿಯಮಗಳನ್ವಯ, ಈ ಹಿಂದೆ ಇದ್ದ ಇ-ಸ್ವತ್ತು ತಂತ್ರಾಂಶವನ್ನು ಮಾರ್ಪಡಿಸಿ ಚಾಲನೆಗೊಳಿಸಲಾಗಿದೆ, ತಂತ್ರಾಂಶದಲ್ಲಿ ಈವರೆಗೂ ಒಟ್ಟು 8886 ಅರ್ಜಿಗಳನ್ನು ಆನ್‍ಲೈನ್ ಮೂಲಕ ಸ್ವೀಕರಿಸಲಾಗಿದ್ದು, ತಂತ್ರಾಂಶ ಸಿದ್ಧಪಡಿಸಿರುವ ಎನ್.ಐ.ಸಿ ತಂತ್ರಾಂಶದ ದೋಷದಿಂದಾಗಿ ಕೆಲಮೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶವನ್ನು ನಿಯಮಗಳನ್ವಯ ಮಾರ್ಪಡು ಮಾಡಲಾಗಿದ್ದು, ಸಾರ್ವಜನಿಕರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಲಾಗಿನ್ ಸೃಜಿಸಲಾಗಿರುತ್ತದೆ. ಇ-ಸ್ವತ್ತು 2.0 ತಂತ್ರಾಂಶವನ್ನು ʼಭೂಮಿʼ, ʼಕಾವೇರಿʼ ʼಪಂಚತಂತ್ರʼ ʼಮೋಜಿಣಿʼ ಹಾಗೂ ಎಸ್ಕಾಂಗಳ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿರುತ್ತದೆ. ಸದರಿ ಸಂಯೋಜನೆಯಿಂದ ತಾಂತ್ರಿಕ ಸಮಸ್ಯೆಗಳು/API ಸಮಸ್ಯೆಗಳು ಉಂಟಾಗಿದೆ ಎಂದೂ ಸಚಿವರು ಹೇಳಿದ್ದಾರೆ.
ನಿಯಮಗಳಿಗೆ ಹಾಗೂ ಇ-ಸ್ವತ್ತು ತಂತ್ರಾಂಶದ ಬಳಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಹಾಯಕ್ಕಾಗಿ ಇಲಾಖೆಯಿಂದ ಸಹಾಯವಾಣಿ (9483476000) ಪ್ರಾರಂಭಿಸಲಾಗಿದ್ದು, ಪ್ರತಿದಿನ ಸರಾಸರಿ ಮೂರು ಸಾವಿರಕ್ಕೂ ಹೆಚ್ಚು ಕರೆಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗುತ್ತಿದೆ. ಅದೇ ರೀತಿ ಜಿಲ್ಲಾ ಸಹಾಯವಾಣಿಗಳನ್ನು ಪ್ರಾರಂಭಿಸಲಾಗಿದ್ದು, ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು https://eswathu.karnataka.gov.in/Login.aspx ರಲ್ಲಿ “ಸಂಪರ್ಕಿಸಿ” ಶೀರ್ಷಿಕೆಯಡಿ ಹಾಗೂ https://panchatantra.karnataka.gov.in ರಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಸಹಾಯ ವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದ್ದು, ಮತ್ತೊಮ್ಮೆ ಪುನಶ್ಚೇತನ ತರಬೇತಿಯನ್ನು ಆಯೊಜೀಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಾರ್ವಜನಿಕ ಪೋಟರ್ಲ್ ಮೂಲಕ (Citizen Login) ತಮ್ಮ ಆಸ್ತಿಗೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ರಲ್ಲಿನ ವರ್ಗೀಕರಣಕ್ಕೆ ಅನುಗುಣವಾಗಿ ನಮೂನೆ-11ಎ ಅಥವಾ ನಮೂನೆ 11-ಬಿ ಗಳನ್ನು ತಾವಿರುವಲ್ಲಿಯೇ ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿರುತ್ತದೆ.
ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಾರ್ವಜನಿಕ ಪೋರ್ಟಲ್ ಮೂಲಕ ಪಂಚತಂತ್ರ ತಂತ್ರಾಂಶದಲ್ಲಿನ ಆಸ್ತಿಗಳ ಅರ್ಜಿ, ತೆರಿಗೆ ವ್ಯಾಪ್ತಿಯಿಂದ ಹೊರಗಿನ ಆಸ್ತಿಗಳ ಅರ್ಜಿ, ನಮೂನೆ-11 ಎ/ 11ಬಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಹೊಸ ಬಡವಾಣೆ ಮತ್ತು ಬಹುಮಹಡಿ (ಅಪಾರ್ಟ್ಮೆಂಟ್) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಇ-ಸ್ವತ್ತು 2.0 ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇ-ಸ್ವತ್ತು ಆನ್‌ಲೈನ್ ಅರ್ಜಿಗಳಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿರುವ ಸಚಿವರು ಪ್ರಕ್ರಿಯೆಯನ್ನು ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾಲಾವಧಿಯನ್ನು ನಿಗದಿಪಡಿಸಲಾಗಿರುವುದಿಲ್ಲ, ಆದ್ದರಿಂದ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಇ-ಸ್ವತ್ತು 2.0 ತಂತ್ರಾಂಶದಲ್ಲಿ ಸಲ್ಲಿಸುವ ಅರ್ಜಿಗಳನ್ನು ನಿಯಮಗಳ ಅನ್ವಯ ಪರಿಶೀಲಿಸಿ ನಮೂನೆಗಳನ್ನು ವಿತರಿಸಲು ಕ್ರಮವಹಿಸಲಾಗುತ್ತಿದ್ದು, ಇಲಾಖೆಯೊಂದಿಗೆ ಸಹಕರಿಸಬೇಕೆಂದು ಸಚಿವರು ಸಾರ್ವಜನಿಕರನ್ನು ಕೋರಿದ್ದಾರೆ.
‘ಸಾಗರ’ ತಾಲ್ಲೂಕಿನ ಜನತೆ ಗಮನಕ್ಕೆ: ಜ.4ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut








