ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕಬ್ಬಿಣ ಮತ್ತು ಗೋಡೆ ಕೊರೆಯುವ ಮಷಿನ್ ಹಿಡಿದಿದ್ದ ಬಾಲಕ ಆಕಸ್ಮಿಕವಾಗಿ ಆನ್ ಮಾಡಿದ್ದರಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾನೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತಾವರೆಕೆರೆ ಗ್ರಾಮದಲ್ಲಿ ಘಟನೆ ನಡೆದಿದೆ. ದರ್ಶನ್ (11) ಮೃತ ಬಾಲಕ. ಈತನ ತಂದೆ ಪುಟ್ಟಸ್ವಾಮಿ ಮನೆ ಗಾರೆ ಕೆಲಸ ಮಾಡುತ್ತಿದ್ದರು.
ಈ ವೇಳೆ ಮನೆಯ ಬಳಿ ಕಬ್ಬಿಣ ಹಾಗೂ ಗೋಡೆ ಕೊರೆಯುವ ಮಷಿನ್ ಇಟ್ಟಿದ್ದರು. ಮಧ್ಯಾಹ್ನ 2 ಗಂಟೆಗೆ ಆಟವಾಡಿಕೊಂಡಿದ್ದ ದರ್ಶನ್ ಮಷಿನ್ ತೆಗೆದುಕೊಂಡು ಆಕಸ್ಮಿಕವಾಗಿ ಆನ್ ಮಾಡಿದ್ದಾನೆ. ಕೂಡಲೇ ಮಷಿನ್ ಚಕ್ರ ಆತನ ಎದೆ, ಭುಜ, ಕೈಗಳನ್ನು ಸೀಳಿದೆ. ಕೂಡಲೇ ಆತ ನನ್ನು ಪೋಷಕರು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲು ಮುಂದಾದರೂ ಮಾರ್ಗಮಧ್ಯ ಸಾವನ್ನಪ್ಪಿದನು. ಬೆಳ್ಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.








