ಶಿವಮೊಗ್ಗ: ಎನ್ ಪಿ ಎಸ್ ರದ್ದುಗೊಳಿಸಬೇಕು. ಓಪಿಎಸ್ ಜಾರಿಗೊಳಿಸಬೇಕು ಎಂಬುದು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿಯೂ ಕ್ರಮವಹಿಸಿದೆ. ಒಂದು ವೇಳೆ ಜಾರಿಗೊಳಿಸದೇ ಹೋದರೇ ಓಪಿಎಸ್ ಜಾರಿಗೆ, ಕೇಂದ್ರದ ಮಾದರಿಯಲ್ಲೇ ರಾಜ್ಯ ಸರ್ಕಾರಿ ನೌಕರರಿಗೂ ವೇತನ ನೀಡುವುದಕ್ಕೆ ಹೋರಾಟ ರೂಪಿಸಲಿದೆ ಎಂಬುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.
ಮಂಗಳವಾರದಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದಂತ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಸರ್ಕಾರಿ ನೌಕರರು ಒತ್ತಡದ ನಡುವೆಯೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಭಾಷೆ ಬಳಸಲು ಹಿಂದೆಮುಂದೆ ಆಗಬಹುದು. ಆದರೆ ಸರ್ಕಾರಿ ನೌಕರರ ಕನ್ನಡಾಭಿಮಾನ ಸದಾ ಸ್ಮರಣೀಯವಾದದ್ದು. ಸಾಗರದಲ್ಲಿ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಬೇಕು ಎಂದರು.
ಮಲೆನಾಡಿನಲ್ಲಿ ಕನ್ನಡ ಭಾಷೆಗೆ ಉತ್ತಮ ನೆಲೆಯಿದೆ. ಗಡಿಭಾಗದ ಪ್ರದೇಶಗಳಲ್ಲಿ ವಿವಿಧ ಭಾಷೆಗಳ ಹಾವಳಿಯಿಂದಾಗಿ ಕನ್ನಡಕ್ಕೆ ಹಿನ್ನಡೆಯಾಗಿದೆ. ಮಲೆನಾಡಿನಾದ್ಯಂತ ಕನ್ನಡ ನೆಲ, ಜಲ, ಭಾಷೆ ಕುರಿತು ಅಭಿಮಾನವಿದೆ. ಇಂತಹ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ತೊಡಗಿರುವಂತ ನಿಮಗೆಲ್ಲರಿಗೂ ಅಭಿನಂದನೆಗಳು ಅಂತ ಹೇಳಿದರು.
ಸಾಗರದ ಸರ್ಕಾರಿ ನೌಕರರು ಸಂಘಟನೆಯ ಕರೆಗೆ ನಿರ್ಲಕ್ಷ್ಯತನದಿಂದ ವರ್ತಿಸೋದನ್ನು ಸಹಿಸಲು ಸಾಧ್ಯವಿಲ್ಲ. ಇಲ್ಲಿನ ನೌಕರರು ಅತೀ ಬುದ್ಧಿವಂತಿಕೆ ತೋರಿಸುವುದನ್ನು ಬಿಟ್ಟು ಸಂಘಟನೆಯ ಸಮಾವೇಶದಲ್ಲಿ ಸ್ವಯಂ ಪ್ರೇರಿತವಾಗಿ ತೊಡಗಿಸಿಕೊಳ್ಳಬೇಕು ಎಂಬುದಾಗಿ ಎಚ್ಚರಿಸಿದರು.
ಸಾಗರ ತಾಲ್ಲೂಕಿನಲ್ಲಿ 1,700ಕ್ಕೂ ಹೆಚ್ಚು ನೌಕರರಿದ್ದಾರೆ. ಇಲ್ಲಿ ಶೇ.50ರಷ್ಟು ನೌಕರರು ಹಾಜರಿಲ್ಲ. ನಿಮ್ಮ ನೌಕರರ ಸಂಘದ ಕಾರ್ಯಕ್ರಮಕ್ಕೆ ನೀವೇ ಬಾರದೇ ಇದ್ದರೇ ನಾನ್ಯಾಕೆ ಬರಬೇಕು? ಎಂಬುದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಆ ಮೂಲಕ ಗೈರು ಹಾಜರಿಯ ನೌಕರರಿಗೆ ಚಾಟಿ ಬೀಸಿದರು.
ಸರ್ಕಾರಿ ನೌಕರರ ಪರವಾಗಿ ಸಂಘಟನೆಯಿಂದ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ 7ನೇ ವೇತನ ಜಾರಿ ಮಾಡಿಸಲಾಗಿದೆ. ಇದರಿಂದ ಎಲ್ಲಾ ನೌಕರರಿಗೂ ಲಾಭವಾಗಿದೆ. ಇದು ಸಂಘಟನೆಯ ಶಕ್ತಿಯ ಫಲ ಎನ್ನುವುದನ್ನು ಸ್ಮರಿಸಬೇಕು. ಮುಂದೆ ಇಂತಹ ಹಲವು ಸವಾಲುಗಳನ್ನು ಎದುರಿಸಲು ಸಂಘಟನೆಗೆ ಸ್ಪೂರ್ತಿ ನೀಡಲು ಉಪಸ್ಥಿತರಿದ್ದು ಸಹಕರಿಸುವ ಅಗತ್ಯವಿದೆ ಎಂದು ಕಿವಿಮಾತು ಹೇಳಿದರು.
ರಾಜ್ಯದಲ್ಲಿ 2.90 ಲಕ್ಷ ಎನ್ ಪಿ ಎಸ್ ನೌಕರರು ಇದ್ದಾರೆ. ಈಗಾಗಲೇ ವಿವಿಧ ಹಂತಗಳಲ್ಲಿ ಸರ್ಕಾರಿ ನೌಕರರ ಸಂಘದ ಪ್ರಯತ್ನದಿಂದಾಗಿ ಎನ್ ಪಿಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಯಾಗಲಿದೆ. ಇಂತಹ ಹತ್ತಾರು ಬದಲಾವಣೆಯನ್ನು ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಮಾಡಿರುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ನೌಕರರಿಗೆ ನೀಡುವಂತ ವೇತನ ಮಾದರಿಯಲ್ಲೇ ವೇತನ ಕ್ರಮ ಜಾರಿಯಾಗಬೇಕಿದೆ. ಈಗಾಗಲೇ ಈ ಸಂಬಂಧ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದಿದ್ದೇವೆ. ದೇಶದ 22 ರಾಜ್ಯಗಳು ಸೆಂಟ್ರಲ್ ಪೇ ಯೋಜನೆ ಜಾರಿಗೆ ತಂದಿರುವುದನ್ನು ಸಿಎಂ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮಹಿಳಾ ನೌಕರರಿಗೆ ಋತುಚಕ್ರ ರಜೆ ಯೋಜನೆ ಜಾರಿಯಾಗಿದ್ದು 1.72 ಲಕ್ಷ ಮಹಿಳಾ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ಮಹಿಳಾ ನೌಕರರ ತಂದೆ-ತಾಯಿಗಳಿಗೆ ಉಚಿತ ಚಿಕಿತ್ಸೆ ನೀಡುವಂತ ಆರೋಗ್ಯ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಡಿ 450ಕ್ಕೂ ಹೆಚ್ಚು ವಯೋವೃದ್ಧರು ಉಚಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದರು.
ಸರ್ಕಾರಿ ನೌಕರರು ಅಪಘಾತದಲ್ಲಿ ಮೃತಪಟ್ಟರೇ ಅಂತವರ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡುವ ಯೋಜನೆ ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 2.73 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದಾವೆ. ಈ ಹುದ್ದೆಗಳು ಭರ್ತಿಯಾಗದ ಕಾರಣ ಹಾಲಿ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಹೀಗಿದ್ದರೂ ನೌಕರರು ನಾವು ಪಡೆಯುವ ವೇತನಕ್ಕೆ ಅನುಗುಣವಾಗಿ ಪ್ರಮಾಣಿಕವಾಗಿ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಸರ್ಕಾರದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್.ಎನ್ ಮಾತನಾಡಿ ಸರ್ಕಾರಿ ನೌಕರರ ಸಂಘದ ಕಾರ್ಯ ಚಟುವಟಿಕೆಗಳ ಕುರಿತು ಸುದೀರ್ಘವಾಗಿ ವಿವರಿಸಿದರು. ಅಲ್ಲದೇ ಶಾಸಕರ ಸಹಕಾರ, ಸ್ಪಂದನೆ, ಅವಿಸ್ಮರಣೀಯವಾದದ್ದು ಎಂಬುದಾಗಿ ಹೇಳಿದರು.
ರಾಜ್ಯದ 5 ಲಕ್ಷದ 50 ಸಾವಿರ ಸಂಖ್ಯೆಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಅವರು ಅಧ್ಯಕ್ಷರಾದ ನಂತ್ರ ನೌಕರರ ಪರವಾಗಿ ಸರಣಿ ಯೋಜನೆಗಳ ಸೌಲಭ್ಯಗಳನ್ನು ಸರ್ಕಾರದಿಂದ ಕೊಡಿಸುವಂತ ಕೆಲಸ ಮಾಡುತ್ತಿದ್ದಾರೆ. ಅವರು ಪಾದರಸದಂತೆ ಕ್ರಿಯಾಶೀಲರಾಗಿ ನಿರಂತರ ಸ್ಪಂದನೆಯ ಯುವ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಹೇಳುವ ಮೂಲಕ ಸಿಎಸ್ ಷಡಕ್ಷರಿ ಅವರ ಕಾರ್ಯವನ್ನು ಮಾತಿನಲ್ಲಿಯೇ ತಾಲ್ಲೂಕು ಅಧ್ಯಕ್ಷ ಸಂತೋಷ್ ಕುಮಾರ್ ತೆರೆದಿಟ್ಟರು.
ರಾಜ್ಯದ ಸರ್ಕಾರಿ ನೌಕರರ ಎನ್ ಪಿ ಎಸ್ ಸಮಸ್ಯೆ ಪರಿಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದಂತ ಅವರು, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರಲ್ಲಿಯೂ ಸರ್ಕಾರದ ಮೇಲೆ ಒತ್ತಡ ಹೇರಿ ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿಗೊಳಿಸಲು ಸಹಕರಿಸುವಂತೆ ಕೋರಿದರು.
ನೌಕರರ ಕ್ರೀಡಾಕೂಟಕ್ಕೆ ಸರ್ಕಾರದಿಂದ 3 ಕೋಟಿ ಅನುದಾನ ಕೊಡಿಸುವ ಮೂಲಕ ಕ್ರೀಡಾಸ್ಪೂರ್ತಿಯನ್ನೇ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ತುಂಬಿದ್ದಾರೆ. ಅವರ ಅವಿರತ ಕಾರ್ಯ ಎಲ್ಲರಿಗೂ ಮಾದರಿಯಾದಂತದ್ದು ಎಂಬುದಾಗಿ ಹೇಳಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..
BREAKING: ರಾಜ್ಯದ ‘ಗ್ರಾಮೀಣ ಜನತೆ’ಗೆ ಗುಡ್ ನ್ಯೂಸ್: ಈ ಕಟ್ಟಡಗಳಿಗೆ ‘OC’ ವಿನಾಯ್ತಿ ನೀಡಿ ಸರ್ಕಾರ ಅಧಿಕೃತ ಆದೇಶ








