ಬೆಂಗಳೂರು : ಸಣ್ಣ ವಯಸ್ಸಿನಿಂದಲೇ ಬರವಣಿಗೆ ರೂಢಿಸಿಕೊಂಡು 9ನೇ ವಯಸ್ಸಿಗೆ ‘ಟೇಲ್ಸ್ ಬೈ ಪರಿ’ ಪುಸ್ತಕವನ್ನು ಬರೆದು ಹೆಸರು ಮಾಡಿರುವ ನಮ್ಮ ಬೆಂಗಳೂರಿನ ಪುಟ್ಟ ಲೇಖಕಿ ಪರಿಣಿತಾ ಬಿ. ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಬಸವನಗುಡಿಯ ಎನ್ಇಟಿ ಪಬ್ಲಿಕ್ ಶಾಲೆಯಲ್ಲಿ 4ನೇ ತರಗತಿ ಓದುತ್ತಿರುವ ಪರಿಣಿತಾ ಬರೆದಿರುವ ಪುಸಕ್ತ ‘ಟೇಲ್ಸ್ ಬೈ ಪರಿ’. ಈಗ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಗೊಂಡಿದ್ದು, “ಯುವ ಲೇಖಕಿ” ಎಂಬ ಮನ್ನಣೆಯನ್ನೂ ತಂದುಕೊಟ್ಟಿದೆ.
ಪರಿಣಿತಾಳ ಮೊದಲ ಕಥಾ ಪುಸ್ತಕ ‘ಟೇಲ್ಸ್ ಬೈ ಪರಿ’ 2025ರ ಮಾರ್ಚ್ 8 ರಂದು ಲೋಕಾರ್ಪಣೆಗೊಂಡಿತ್ತು. ಸುಬ್ಬು ಪಬ್ಲಿಕೇಷನ್ಸ್ ಪ್ರಕಟಿಸಿದ್ದ ಪುಸ್ತಕವು ಪರಿಣಿತಾ ಅವರ ಪ್ರತಿಭೆ ಹಾಗೂ ಸಾಹಿತ್ಯ ಆಸಕ್ತಿಯನ್ನು ಗುರುತಿಸುವಂತೆ ಮಾಡಿತ್ತು, ಪರಿಣಿತಾ ಅವರನ್ನು ಶಿಕ್ಷಕರು ಹಾಗೂ ಅನೇಕ ಗಣ್ಯರು ಮೆಚ್ಚಿಕೊಂಡಿದ್ದಾರೆ.
ಸಾಹಿತ್ಯ ಓದು, ಬರಹದಲ್ಲಿ ಬಾಲ್ಯದಿಂದಲೇ ಆಸಕ್ತಿ ಬೆಳೆಸಿಕೊಂಡಿರುವ ಪರಿಣಿತಾ, ಸ್ವಂತಿಕೆ, ಅಭಿವ್ಯಕ್ತಿ ಮತ್ತು ಕಥೆ ಹೆಣೆಯುವಿಕೆಯಲ್ಲಿ ತನ್ನದೇ ಶೈಲಿಯನ್ನು ರೂಪಿಸಿಕೊಂಡಿದ್ದಾಳೆ. ಕಥಾ ಸಂಕಲ ‘ಟೇಲ್ಸ್ ಬೈ ಪರಿ’ ವ್ಯಕ್ತಿ-ವ್ಯಕ್ತಿತ್ವಗಳು ಹಾಗೂ ಸಮಾಜದ ಸೂಕ್ಷ್ಮ ಕಥೆಗಳನ್ನು ಹೇಳುತ್ತದೆ. 10 ವರ್ಷದ ಪರಿಣಿತಾಳ ಬರವಣಿಗೆ ಈಗ ದೇಶದ ಗಮನ ಸೆಳೆದಿದೆ, ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಪುಟಾಣಿ ಲೇಖಕಿ ಪರಿಣಿತಾ ಅವರ ಮಹತ್ವದ ಸಾಧನೆಗೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ನೀಡಿರುವ ಅಧಿಕೃತ ಮಾನ್ಯತೆ, ಅವರ ಕುಟುಂಬಕ್ಕೆ ಮಾತ್ರವಲ್ಲದೆ ಶಿಕ್ಷಣ ಕ್ಷೇತ್ರಕ್ಕೂ ಹೆಮ್ಮೆಯ ಕ್ಷಣವಾಗಿದೆ. ಲೇಖಕಿ, ಅಂಕಣಕಾರ್ತಿಯೂ ಆಗಿರುವ ದಂತ ವೈದ್ಯೆ ತಾಯಿ ಡಾ. ಅನುಷಾ ಆರ್. ಗುಪ್ತಾ, ಬೆಸ್ಕಾಂ ಅಧಿಕಾರಿ ತಂದೆ ಕೆ. ಬಾಲಾಜಿ ಅವರ ಪ್ರೋತ್ಸಾಹ ಮತ್ತು ಬೆಂಬಲದೊಂದಿಗೆ, ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಸದಾ ಪ್ರೋತ್ಸಾಹ ನೀಡುತ್ತಿರುವ ಬಸವನಗುಡಿಯ ಎನ್ಇಟಿ ಪಬ್ಲಿಕ್ ಶಾಲೆಯ ಪಾತ್ರವೂ ಮಹತ್ವದಾಗಿದೆ.
ಪರಿಣಿತಾ ಸಾಧನೆಯು ಪುಟ್ಟ ಮಿನುಗು ನಕ್ಷತ್ರದಂತೆ ಹೊಳೆಯುತ್ತಿದ್ದು, ಇನ್ನಷ್ಟು ಮಕ್ಕಳಿಗೆ ತಮ್ಮದೇ ಕಥೆ ಹೇಳಲು, ಕವಿತೆ ಬರೆಯಲು ಸ್ಪೂರ್ತಿ ನೀಡಲಿದೆ ಎಂದರೆ ತಪ್ಪಾಗಲಾರದು. ಸೂಕ್ತ ಮಾರ್ಗದರ್ಶನ, ನಿರಂತರ ಪ್ರೋತ್ಸಾಹ ಮತ್ತು ಪರಿಶ್ರಮವಿದ್ದರೆ ಬಾಲ್ಯದಲ್ಲಿಯೇ ಅಸಾಧಾರಣ ಸಾಧನೆಗಳನ್ನು ಮಾಡಬಹುದು ಎಂಬುದಕ್ಕೆ ಪರಿಣಿತಾ ಬಿ. ಅತ್ಯುತ್ತಮ ಉದಾಹರಣೆ.
ಕನ್ನಡಿಗರು ಕನ್ನಡವನ್ನು ಗರ್ವದಿಂದ ಬಳಸುವ ಜೊತೆಗೆ ಉಳಿಸಬೇಕು: ಶಾಸಕ ಗೋಪಾಲಕೃಷ್ಣ ಬೇಳೂರು ಕರೆ








