ಬೆಂಗಳೂರು: ಶ್ರೀಲಂಕಾ ಪತ್ರಕರ್ತರ ನಿಯೋಗವು ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಭೇಟಿ ನೀಡಿ ಸಂವಾದ ನಡೆಸಿತು. ಕರ್ನಾಟಕ ಪ್ರವಾಸದಲ್ಲಿರುವ ನಿಯೋಗ, ಮಾಹಿತಿ ಹಕ್ಕು ಆಯೋಗಕ್ಕೆ ಸೌಹಾರ್ದಯುತವಾಗಿ ಭೇಟಿ ಹಲವು ವಿಷಯಗಳ ಮೇಲೆ ಚರ್ಚೆ ನಡೆಸಿತು.
ಕರ್ನಾಟಕದಲ್ಲಿ ಮಾಹಿತಿ ಹಕ್ಕು ಆಯೋಗ ಕಳೆದ ಎರಡು ದಶಕಗಳಲ್ಲಿ ಹೇಗೆ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಆಯೋಗದ ಪ್ರಭಾರಿ ಮುಖ್ಯ ಆಯುಕ್ತರಾದ ಕೆ.ರಾಮನ್, ಆಯುಕ್ತರುಗಳಾದ ರಾಜಶೇಖರ್, ರುದ್ರಣ್ಣ ಹರ್ತಿಕೋಟೆ, ಮಮತಾ ಮತ್ತು ಬದ್ರುದ್ದೀನ್ ಅವರು ಮಾಹಿತಿ ನೀಡಿದರು.
ಶ್ರೀಲಂಕಾದಲ್ಲಿ ಕಳೆದ 3 ವರ್ಷಗಳಿಂದ ಮಾಹಿತಿ ಹಕ್ಕು ಆಯೋಗ (ಆರ್‌ಟಿಐ)ಪ್ರಾರಂಭವಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ಮಾಜಿ ಕಾರ್ಯದರ್ಶಿ ಮತ್ತು ನಿಶ್ಚಿನಾಂತು ಆಲ್ವೀಸ್ ಹಾಗೂ ಹಿರಿಯ ಪತ್ರಕರ್ತ ಪಾತುಮ್ ಪಾಸ್ಕೂಲ್ ಅವರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಪತ್ರಕರ್ತರ ಸಂಘದ ಹೋರಾಟ ಕಾರಣದಿಂದ ಪತ್ರಕರ್ತರಿಗೆ ಬಸ್ ಪಾಸ್, ಮಾಸಾಶನ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದೆ ಎನ್ನುವ ಮಾಹಿತಿಯನ್ನು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಲಂಕಾ ನಿಯೋಗ, ಶ್ರೀಲಂಕಾದಲ್ಲಿ ಪತ್ರಕರ್ತರಿಗೆ ಯಾವುದೇ ಸೌಲಭ್ಯಗಳು ಇನ್ನೂ ಲಭ್ಯವಿಲ್ಲ ಎನ್ನುವ ಮಾಹಿತಿಯನ್ನು ಅವರು ನೀಡಿದರು. ಆದರೆ, ಶ್ರೀಲಂಕಾದಲ್ಲಿ ಮಾಧ್ಯಮ ಮೇಲೆ ಸರ್ಕಾರ ಯಾವುದೇ ನಿಯಂತ್ರಣವನ್ನು ಹೊಂದಿಲ್ಲ. ಸ್ವತಂತ್ರವಾಗಿ ಮಾಧ್ಯಮ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಸಂಜೀವ ಥಿಸೆರಾ, ಹೇಮಂತ ಕುಮಾರಸಿಂಘೆ, ತುಷಾರ ಹೆಟ್ಟಿಯಾರಾಚ್ಚಿ, ಸಿ.ಎ.ದಮ್ಸಿರಿ ಅಜಿತ್ ಅವರು ಶ್ರೀಲಂಕಾ ನಿಯೋಗದಲ್ಲಿದ್ದರು








