ಶಿವಮೊಗ್ಗ: ಜಡತ್ವದಿಂದ ಹೊಂದಿರುವ ಜನರಿಗೆ ದುಡಿಮೆಯನ್ನು ಯೋಜನೆ ಕಲಿಸಿಕೊಟ್ಟಿದೆ ಪ್ರತಿಯೊಬ್ಬರಲ್ಲಿಯೂ ನಾನು ನನ್ನ ಕುಟುಂಬವನ್ನು ಹೇಗೆ ರಕ್ಷಣೆ ಮಾಡಬೇಕು ಎಂಬುದನ್ನು ಸ್ವ ಸಹಾಯ ಗುಂಪುಗಳ ಮೂಲಕ ಜನರು ಅರಿತಿದ್ದಾರೆ. ಜಾತಿ ಮತ ಭೇದ ಇಲ್ಲದೇ ಎಲ್ಲರೂ ಸಮಾನತೆಯಿಂದ ಬದುಕುವ ವಾತಾವರಣ ನಿರ್ಮಾಣ ಆಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಎಲ್ಲರಿಗೂ ಅಬಿವೃದ್ಧಿ ಹೊಂದಲು ಸಮಾನ ಅವಕಾಶ ಕಲ್ಪಿಸಿದೆ. ಈ ಕಾರಣದಿಂದಾಗಿ ಜನಸಾಮಾನ್ಯರ ಬದುಕಿಗೆ ಬೆಳಕಾಗಿದೆ ಎಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕ ನಿಗಮ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಸೋಮವಾರದಂದು ಶಿವಮೊಗ್ಗದ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಗರ ತಾಲೂಕು, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಆನಂದಪುರ ವಲಯದ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಆಯೋಜಿಸಲಾದ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮದ್ಯ ವರ್ಜನಾ ಶಿಬಿರಗಳ ಮೂಲಕ ವ್ಯಸನ ಮುಕ್ತರನ್ನಾಗಿ ಮಾಡಿ ಬಡ ಕುಟುಂಬಗಳಿಗೆ ಬೆಳಕು ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಕೆರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾದರಿಯಾಗಿ ಮಾಡುತ್ತಿದ್ದಾರೆ. ಕೆರೆ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಶೇಕಡಾ 50ರಷ್ಟು ಅನುದಾನ ಒದಗಿಸಲಾಗುವುದು. ಬಡ ಜನರ ಸೇವೆ ಮಾಡುವ ಕಾರ್ಯಕ್ರಮಗಳು ಎಂದರೆ ಅತ್ಯಂತ ಪ್ರೀತಿ ಎಲ್ಲರೂ ಬದುಕನ್ನು ಚೆನ್ನಾಗಿ ನಡೆಸಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರಗಳು ಬಂದಾಗ ಅದರ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಿದ್ದೇವೆ. ಸತ್ಯ ಗೆದ್ದಿದೆ. ಶ್ರೀ ಕ್ಷೇತ್ರದ ಮೂಲಕ ಮಾಡುವ ಪ್ರತಿಯೊಂದು ಕಾರ್ಯಕ್ರಮಗಳು ಕೂಡ ಬಡವರನ್ನು ತಲುಪುತ್ತಿದೆ ಎಂದು ಕೊಂಡಾಡಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಪರಮ ಪೂಜ್ಯ ಶ್ರೀ ಶ್ರೀ ರೇಣುಕಾನಂದ ಮಹಾ ಸ್ವಾಮೀಜಿಯವರು ಪೀಠಾಧ್ಯಕ್ಷರು, ಶ್ರೀ ನಾರಾಯಣ ಗುರು ಮಹಾಸಂಸ್ಥಾನ ನಿಟ್ಟೂರು ಹುಂಚದ ಕಟ್ಟೆ ತೀರ್ಥಹಳ್ಳಿ ಯವರು ಆಶೀರ್ವಚನ ನೀಡುತ್ತಾ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಧರ್ಮದ ದಾರಿ ಹೆದ್ದಾರಿ ಧರ್ಮ ನಮ್ಮ ಬದುಕಿಗೆ ಜೀವನದಲ್ಲಿ ಸತ್ಕಾರ್ಯಗಳನ್ನು ಮಾಡಲು ಪ್ರೇರೇಪಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಹಳ್ಳಿಗಳ ಉದ್ಧಾರ ಆಗುತ್ತಾ ಭಾರತ ದೇಶ ರಾಮ ರಾಜ್ಯ ಆಗುತ್ತದೆ. ಮನುಷ್ಯನ ಬದುಕಿಗೆ ಬಹಳ ಅವಶ್ಯ ವಾಗಿ ಬೇಕಾಗಿರುವುದು ಭಕ್ತಿ ಯಾರು ಭಕ್ತಿಯ ಪಥದಲ್ಲಿ ಜೀವನ ನಡೆಸುತ್ತಾರೆಯೇ ಅವರು ಭುಮಿಯ ಮೇಲೆ ಹೆಗ್ಗುರುತನ್ನು ಮೂಡಿಸುತ್ತಾರೆ. ಭಕ್ತಿಯ ಗುಣಗಳು ಸದ್ಗುಣಗಳನ್ನು ಬೆಳೆಸುತ್ತದೆ. ಅಂತರಂಗದಲ್ಲಿ ತುಂಬಿರುವ ಅವಗುಣಗಳನ್ನು ತೆಗೆಯಬೇಕು. ಮಕ್ಕಳಿಗೆ ಭಕ್ತಿಯ ಸಂಸ್ಕಾರ ನೀಡಬೇಕು ಎಂದು ವಿವರಿಸಿದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕರಾದ ದಿನೇಶ್ ಎಂ ಯೋಜನೆಯ ಕಾರ್ಯಮಗಳ ಕುರಿತು ವಿವರಿಸಿದರು.
ಸಬಾ ಅಧ್ಯಕ್ಷತೆಯನ್ನು ಮಹೇಶ್ ಟಿ ಅಧ್ಯಕ್ಷರು ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ ಆನಂದಪುರ ವಹಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಕೆ ಹಾಲಪ್ಪ, ಅಧ್ಯಕ್ಷರು, ಶ್ರೀ ವೀರಾಂಜನೇಯ ಸೇವಾ ಟ್ರಸ್ಟ್ ಆನಂದಪುರ ಅವರು ವಹಿಸಿದ್ದರು. ಆನಂದಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ ಗುರುರಾಜ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಉಮೇಶ್ ಎನ್, ವಿಜಯ್ ರೇವಣಕರ್, ತಾಲೂಕು ಕಾಂಗ್ರೇಸ್ ಅಧ್ಯಕ್ಷರಾದ ಕಳಸೆ ಚಂದ್ರಪ್ಪ, ಮಾರಿಕಾಂಬಾ ಕಮಿಟಿಯ ಅಧ್ಯಕ್ಷರಾದ ವೆಂಕಟೇಶ್, ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ, ಆನಂದಪುರ ವಲಯದ ಒಕ್ಕೂಟದ ಅಧ್ಯಕ್ಷರುಗಳು, ಪೂಜಾ ಸಮಿತಿ ಯ ಸದಸ್ಯರು ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ಸಂತೋಷ್ ಸ್ವಾಗತಿಸಿದರು, ಕೃಷಿ ಮೇಲ್ವಿಚಾರಕರಾದ ಕೃಷ್ಣಮೂರ್ತಿ ನಿರೂಪಿಸಿದರು. ವಲಯದ ಸೇವಾ ಪ್ರತಿನಿಧಿ ಗಳು ಹಾಗೂ ಸಿ ಎಸ್ ಸಿ ಸೇವಾ ದಾರರು ಸಹಕರಿಸಿದರು.








