ಮಂಡ್ಯ : ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪೋಲೀಸ್ ಇಲಾಖೆಯಿಂದ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಪ್ರವಾಸಿ ತಾಣಗಳಿಗೆ ಅತಿ ಹೆಚ್ಚು ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಜಿಲ್ಲಾಡಳಿತ ಕೈಗೊಂಡಿದ್ದು, ಪ್ರವಾಸಿಗರಿಗೂ ಸಹ ಹಲವು ಸೂಚನೆಗಳನ್ನು ನೀಡಲಾಗಿದೆ.
ಹೊಸ ವರ್ಷಾಚರಣೆಯ ಸಂಬಂಧ ಮಂಡ್ಯ ಜಿಲ್ಲಾ ಪೊಲೀಸರು ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಪ್ರವೇಶ ನಿರ್ಬಂಧಿಸಿ ಆದೇಶವನ್ನು ಹೊರಡಿಸಿದ್ದಾರೆ. ಡಿಸೆಂಬರ್ 31ರ ಬೆಳಗ್ಗೆ 6 ಗಂಟೆಯಿಂದ ಜನವರಿ 1 ರಾತ್ರಿ 8 ಗಂಟೆಯ ತನಕ ಈ ಆದೇಶ ಜಾರಿಯಲ್ಲಿರುತ್ತದೆ.
ಮಂಡ್ಯ ಜಿಲ್ಲೆಯ ಕಡೆ ಹೋಗಿ ಹೊಸ ವರ್ಷಾಚರಣೆ ಮಾಡುವವರಿದ್ದರೆ ಈ ಕುರಿತು ನೀವು ಮಾಹಿತಿ ತಿಳಿದು ಪ್ರವಾಸ ಮಾಡುವುದು ಉತ್ತಮ. ಕೆ.ಆರ್.ಎಸ್. ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಹೊಸ ವರ್ಷದ ಪ್ರಯುಕ್ತ ಬಲಮುರಿ, ಎಡಮುರಿ ವೇಣುಗೋಪಾಲಸ್ವಾಮಿ ದೇವಾಲಯ, ಚಿಕ್ಕಯಾರಹಳ್ಳಿ ಬಳಿಯ ಕೆ.ಆರ್.ಸಾಗರ ಅಣೆಕಟ್ಟು, ಕಾವೇರಿ ಹಿನ್ನೀರು ಮತ್ತು ನದಿ ಪಾತ್ರದ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರವೇಶವಿಲ್ಲ.
ಇನ್ನು ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ, ಭೀಮೇಶ್ವರಿ, ಗಗನಚುಕ್ಕಿ ಜಲಪಾತ, ಶಿಂಷಾ ಪುರ ಹಾಗೂ ಕೊಂಡದಮ್ಮನಪುರ ಯಾತ್ರಾ ಸ್ಥಳಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಡಿಸೆಂಬರ್ 31ರ ಬೆಳಗ್ಗೆ 6 ಗಂಟೆಯಿಂದ 2026ರ ಜನವರಿ 1ರ ರಾತ್ರಿ 8 ಗಂಟೆಯ ತನಕ ಎರಡು ದಿನಗಳ ಕಾಲ ವರ್ಷಾಚರಣೆ ಮತ್ತು ಮೋಜು ಮಸ್ತಿ ಮಾಡದಂತೆ ಬಿ.ಎನ್.ಎಸ್.ಎಸ್ ಕಲಂ 163ರ ಅನ್ವಯ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಈ ಕುರಿತು ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಪಾಂಡವಪುರ ತಹಶೀಲ್ದಾರ್ ಅವರುಗಳು ಆದೇಶವನ್ನು ಹೊರಡಿಸಿದ್ದಾರೆ. ಸಾರ್ವಜನಿಕರು ಸಹಕಾರ ನೀಡಬೇಕು, ಕಾನೂನು ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ವರದಿ : ಗಿರೀಶ್ ರಾಜ್, ಮಂಡ್ಯ








