ಶಿವಮೊಗ್ಗ: ಸಾಗರದಲ್ಲಿ ದ್ವೇಷ ಭಾಷಣ ಮಸೂದೆಗೆ ತೀವ್ರ ವಿರೋಧವನ್ನು ಬಿಜೆಪಿ ವ್ಯಕ್ತ ಪಡಿಸಿದೆ. ಯಾವುದೇ ಕಾರಣಕ್ಕೂ ಈ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದಂತೆ ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ನೇತೃತ್ವದಲ್ಲಿ ಸಾಗರ ತಾಲ್ಲೂಕು ಬಿಜೆಪಿಯಿಂದ ಪ್ರತಿಭಟನೆ ನಡೆಸಿ ಆಗ್ರಹಿಸಲಾಯಿತು.
ಇಂದು ಶಿವಮೊಗ್ಗದ ಸಾಗರ ನಗರದ ಸಾಗರ ಹೋಟೆಲ್ ಸರ್ಕಲ್ ನಲ್ಲಿ ಬಿಜೆಪಿ ನಗರ, ಗ್ರಾಮಾಂತರ ಮಂಡಲದಿಂದ ದ್ವೇಷ ಭಾಷಣ ಮಸೂದೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಜನರ ವಾಕ್ ಸ್ವಾತಂತ್ರ್ಯದ ಹಕ್ಕನ್ನೇ ಕಸಿದುಕೊಳ್ಳುತ್ತಿರುವಂತ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದಂತ ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು, ಈ ಕಾಯಿದೆ ನಾವು ಒಪ್ಪಿಕೊಂಡರೇ ಭಾರತದ ಸಂವಿಧಾನಕ್ಕೆ ವಿರುದ್ಧದ ಕಾನೂನಾಗಲಿದೆ. ರೈತರು ಸರ್ಕಾರದ ವಿರುದ್ಧ ಧ್ವನಿ ಎತ್ತುವಂತಿಲ್ಲ. ಧರ್ಮಕ್ಕೆ ಆದ ಅನ್ಯಾಯ ಪ್ರತಿಭಟಿಸುವಂತಿಲ್ಲ. ಹೋರಾಟಗರರನ್ನು ಹಣೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಒತ್ತಾಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ಮಸೂದೆಯನ್ನು ಜಾರಿಗೆ ತರೋದಕ್ಕೆ ಹೊರಟಿರೋದು ಹೋರಾಟವನ್ನು ಹತ್ತಿಕ್ಕೋದಕ್ಕೆ ಆಗಿದೆ. ಜನರ ಸ್ವಾತಂತ್ರ್ಯವನ್ನು ಕಸಿಯೋದಕ್ಕೆ ಆಗಿದೆ. ಸತ್ಯ ಹೇಳಿದರೇ ತಡೆದುಕೊಳ್ಳಲು ಆಗಲ್ಲ. ಒಂದು ವೇಳೆ ದ್ವೇಷ ಭಾಷಣ ಕಾಯಿದೆ ಜಾರಿಗೊಂಡರೇ ಇದರ ದುರುಪಯೋಗವೇ ಹೆಚ್ಚು. ನಮ್ಮ ಶಾಸಕರಿಗೆ ಇದು ಅರ್ಥವೇ ಆಗುವುದಿಲ್ಲ. ದ್ವೇಷ ಭಾಷಣದ ಕಾಯಿದೆ ಬಗ್ಗೆ ಸದನದಲ್ಲೂ ಚರ್ಚೆ ಆಗಿಲ್ಲ. ಈ ಕಾಯಿದೆ ಉಪಯೋಗಕ್ಕಿಂತ ದ್ವೇಷವೇ ಹೆಚ್ಚು ಎಂದು ಗುಡುಗಿದರು.
ಶಿವಮೊಗ್ಗ ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಟಿ.ಡಿ ಮೇಘರಾಜ್ ಮಾತನಾಡಿ, ನಾವು ಮಾಡಿದ್ದೆ ನಡೆಯುತ್ತೆ ಅನ್ನೋ ನಿಟ್ಟಿನಲ್ಲಿ ಎರಡು ಸದನದಲ್ಲಿ ದ್ವೇಷ ಭಾಷಣ ಮಸೂದೆ ಪಾಸ್ ಮಾಡಿಸಲಾಗಿದೆ. ಒಂದು ಸುಳ್ಳು ಹತ್ತು ಬಾರಿ ಹೇಳಿ ಅದನ್ನೇ ನಿಜ ಎನ್ನುವುದು ಕಾಂಗ್ರೆಸ್. ಸಂವಿಧಾನದ 19ನೇ ಪರಿಚ್ಛೇದದ ಎ ಮತ್ತು ಬಿ ನಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕು ಇದೆ. ಅದನ್ನು ಉಲ್ಲಂಘಿಸಿ ನಾಗರೀಕರ ಭಾವನೆ, ವ್ಯಕ್ತಿ ಸ್ವಾತಂತ್ರ್ಯವನ್ನು ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದರು.
ದ್ವೇಷ ಭಾಷಣದ ಮಸೂದೆ ಅಪಾಯಕಾರಿಯಾಗಿದೆ. ಸಂವಿಧಾನದ ತಿರುಚುವ ಕೆಲಸವನ್ನು ಕಾಂಗ್ರೆಸ್ ಮಾಡಲು ಹೊರಟಿದೆ. ಇದು ಅಪಾಯಕಾರಿ ವಿಧೇಯಕವಾಗಿದೆ. ಸೋಲಾದಾಗ ಇವಿಎಂ ಕಡೆಗೆ, ಚುನಾವಣಾ ಆಯೋಗದ ಬಗ್ಗೆ ಅಪಚಾರ, ಮತಚೋರಿ ಬಗ್ಗೆ ಗಮನ ಹರಿಸೋ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಈ ವಿಷಯದ ಬಗ್ಗೆ ಮಾತನಾಡಿದರೇ ದ್ವೇಷ ಆಗುತ್ತದೆ ಎಂದು ಹೇಳಿದರು.
ಗ್ಯಾರಂಟಿ ಹೆಸರಿನಲ್ಲಿ ಲೂಟಿ ಹೊಡೆಯುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಮಾತ್ರ ಶೂನ್ಯವೇ ಆಗಿದೆ. ಇದಕ್ಕೆ ಸಾಕ್ಷಿ ನಾಲ್ಕು ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಪಡೆದಿರುವುದಾಗಿದೆ. ಹತಾಶ ಕಾಂಗ್ರೆಸ್ ಭ್ರಷ್ಟ ಆಡಳಿತದಿಂದ ಜನರ ಬೆಂಬಲ ಕಳೆದುಕೊಂಡಿದೆ. ಬಿಜೆಪಿ ಜಾಗೃತಿಯ ದೀಪ ಬೆಳಗಿಸುವ ಕೆಲಸ ಮಾಡುತ್ತಿದೆ. ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬಾರದು. ಜನಾಭಿಪ್ರಾಯವನ್ನು ಕಾಂಗ್ರೆಸ್ ವಿರುದ್ಧ ರೂಪಿಸಬೇಕು. ಮುಂದಿನ ದಿನಗಳಲ್ಲಿ ಜನಾಂದೋಲನವನ್ನು ಬಿಜೆಪಿ ಮಾಡಲಿದೆ ಎಂದರು.
ಶಿವಮೊಗ್ಗಜಿಲ್ಲಾ ಮಹಿಳಾ ಮೋರ್ಜಾ ಅಧ್ಯಕ್ಷೆ ಮಧುರಾ ಶಿವಾನಂದ ಮಾತನಾಡಿ ದ್ವೇಷ ಬಾಷಣದ ಮಸೂದೆ ವಿರುದ್ಧ ಇಂದು ಬಿಜೆಪಿ ಪ್ರತಿಭಟಿಸುತ್ತಿದೆ. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಅನಾಚಾರದಿಂದ ಕೂಡಿದೆ. ಮೂಗಿಗೆ ತುಪ್ಪ ಸೇರಿದಂತೆ ಕೆಲಸ ಮಾಡುತ್ತಿದೆ. ಈ ಮಸೂದೆ ಖಂಡನೀಯ. ತಪ್ಪು ಮುಚ್ಚಿಸೋದಕ್ಕೆ ಮಾತನಾಡುವವರ ಬಾಯಿಗೆ ಬೀಗ ಹಾಕುವ ಕೆಲಸ ಮಾಡುತ್ತಿದೆ. ಇದೊಂದು ಜನ ವಿರೋಧಿ ಮಸೂದೆಯಾಗಿದೆ. ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದರು.
ಜನಪರ ಕಾಯ್ದೆಗಳನ್ನು ತರಬೇಕು. ಒತ್ತಡ ಹೇರುವ, ಜನರನ್ನು ಭಯಭೀತಿಗೊಳಿಸುವ ಕಾಯ್ದೆ ದ್ವೇಷ ಭಾಷಣದ ಮಸೂದೆಯಾಗಿದೆ. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಜೊತೆಗೆ ಯಾವುದೇ ಕಾರಣಕ್ಕೂ ರಾಜ್ಯಪಾಲರು ಅಂಕಿತ ಹಾಕಬಾರದು ಎಂಬುದಾಗಿ ಆಗ್ರಹಿಸುವುದಾಗಿ ತಿಳಿಸಿದರು.
ಸಾಗರ ಗ್ರಾಮಾಂತರ ಮಂಡಲದ ಅಧ್ಯಕ್ಷ ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಜನರ ಹಕ್ಕು, ವಾಕ್ ಸ್ವಾತಂತ್ರ್ಯ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಜನರು ಮಾತನಾಡಬಾರದಾ.? ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಾಧಿಸಿದೆ. ಜನರು ವಾಕ್ ಸ್ವಾತಂತ್ರ್ಯ ಕಿತ್ತುಕೊಂಡಿದೆ. ದ್ವೇಷ ಭಾಷಣ ವಿರೋಧಿ ಬಿಲ್ ರಾಜ್ಯಪಾಲರೇ ಸಹಿ ಹಾಕದೇ ವಾಪಾಸ್ ಕಳುಹಿಸಿ ಎಂದು ಒತ್ತಾಯಿಸಿದರು.
ಸಾಗರ ನಗರ ಮಂಡಲದ ಬಿಜೆಪಿ ಅಧ್ಯಕ್ಷ ಗಣೇಶ್ ಪ್ರಸಾದ್ ಅವರು ಮಾತನಾಡಿ ದ್ವೇಷ ಭಾಷಣ ವಿರೋಧಿ ಕಾಯ್ದೆ ಸದನದಲ್ಲಿ ಪಾಸ್ ಮಾಡಲಾಗಿದೆ. ಈ ಕಾಯಿದೆ ಅನುಸಾರ ಯಾರು ಮಾತನಾಡುವಂತಿಲ್ಲ. ಡಿವೈಎಸ್ಪಿ ನೇರವಾಗಿ ಕೇಸ್ ಹಾಕಬಹುದು. ದ್ವೇಷ ಭಾಷಣ ಕಾಯಿದೆ ಮೂಲಕ ರಾಜ್ಯ ಕಾಂಗ್ರೆಸ್ ತುರ್ತುಸ್ಥಿತಿ ಏರಿದಂತೆ ಕಾಯಿದೆ ಎಂದು ಕಿಡಿಕಾರಿದರು.
ಗೃಹಲಕ್ಷ್ಮಿ ಹಣ ಎರಡು ತಿಂಗಳ ಹಣ 5,000 ಕೋಟಿ ಹಣ ಬಿಡುಗಡೆ ಮಾಡಿಲ್ಲ. ಇದನ್ನು ಕೇಳುವಂತಿಲ್ಲ. ಕೇಳಿದರೇ ಕೇಸ್ ಬೀಳುತ್ತೆ. ಗೃಹ ಲಕ್ಷ್ಮಿ ಹಣ ಬಾರದೇ ಇರೋದರ ಹಿಂದೆ ಈ ಸರ್ಕಾರ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ನಡೆದಂತ ಐದು ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದರು.
ದ್ವೇಷ ಭಾಷಣದ ಕಾಯಿದೆ ನಿಜಕ್ಕೂ ಜನರ ಮಾತು ಹತ್ತಿಕ್ಕುವ ಕೆಲಸ ಮಾಡಿದಂತೆ ಆಗಿದೆ. ಮೋದಿ ಗುಂಡಿಟ್ಟು ಕೊಲ್ಲಿ ಅಂದರು. ದ್ವೇಷ ರಾಜಕಾರಣಕ್ಕೆ ಇನ್ನೂಂದು ಹೆಸರು ಕಾಂಗ್ರೆಸ್. ಒಂದು ರೂ ಅಭಿವೃದ್ಧಿಗೆ ಹಣವನ್ನು ಸಾಗರಕ್ಕೆ ತಂದಿಲ್ಲ. ಹೇಳಿದಂತೆ ಆಸ್ಪತ್ರೆಗೆ ಒಂದು ರೂ ಬಿಡುಗಡೆ ಆಗಿಲ್ಲ. ಮಂತ್ರಿಗಿರಿಗಾಗಿ ಕಾಲಿಗೆ ಬೀಳಬೇಡಿ. ಅನುದಾನಕ್ಕೆ ಬೀಳಿ ಎಂದು ಕಿವಿಮಾತು ಹೇಳಿದರು.
ಜೂನಿಯರ್ ಕಾಲೇಜ್ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದಿಂದ ಹಣ ತಂದಿಲ್ಲ. ಮಕ್ಕಳಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದಂತ ಅವರು, ಸಾಗರ ನಗರಸಭೆಯಿಂದ ಮೂರು ಲಕ್ಷ ಹಣ ನೀಡಲಾಗಿದೆ. ಸಾಗರದ ನಗರ ರಸ್ತೆ ಗುಂಡಿಯನ್ನೇ ಮುಚ್ಚಿಲ್ಲ. ಹೀಗಿದ್ದರೂ ನಗರಸಭೆಯ ಹಣವನ್ನು ಕಾರ್ಯಕ್ರಮಕ್ಕೆ ನೀಡಲಾಗಿದೆ ಎಂದು ಕಿಡಿಕಾರಿದರು.
ದ್ವೇಷ ಭಾಷಣದ ಕಾಯಿದೆಯನ್ನು ಬಿಜೆಪಿ ಉಗ್ರವಾಗಿ ವಿರೋಧಿಸುತ್ತದೆ. ಸಿದ್ದರಾಮಯ್ಯ ಹಿಂದೂ ವಿರೋಧಿ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ವಿಫಲವಾಗಿದೆ.
ಇದನ್ನು ಮುಚ್ಚಿಕೊಳ್ಳಲು ಈ ಕಾಯಿದೆ ಜಾರಿಗೆ ತರೋದಕ್ಕೆ ಹೊರಟಿದೆ. ಆದರೇ ಬಿಜೆಪಿ ಮಾತ್ರ ಯಾವುದೇ ಕಾರಣಕ್ಕೂ ಈ ಕಾಯಿದೆ ಜಾರಿಗೊಳಿಸೋದಕ್ಕೆ ಬಿಡೋದಿಲ್ಲ. ಜಾರಿಗೊಳಿಸಿದ್ದೇ ಆದರೇ ಉಗ್ರ ಹೋರಾಟವನ್ನು ರಾಜ್ಯಾಧ್ಯಂತ ಬಿಜೆಪಿ ಮಾಡಲಿದೆ ಎಂಬುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದಂತ ರಾಜನಂದಿನಿ ಕಾಗೋಡು, ಸತೀಶ್ ಮೊಗವೀರ, ಮಹೇಶ್, ಪ್ರಸನ್ನ ಕೆರೆಕೈ, ಮೈತ್ರಿ ಪಾಟೀಲ್, ಆರ್.ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು..







