ಇ-ಆಸ್ತಿ ತಂತ್ರಾಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳಿಗೆ ಮನೆಯಲ್ಲೇ ಕುಳಿತು ಸುಲಭವಾಗಿ ಇ-ಖಾತಾವನ್ನು ಯಾವುದೇ ಮಧ್ಯವರ್ತಿಗಳು ಹಾಗೂ ಅಧಿಕಾರಿಗಳ ಸಂಪರ್ಕಿಸದೇ ಪಡೆದುಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದೆ.
ಇ-ಆಸ್ತಿ ತಂತ್ರಾಂಶದೊಂದಿಗೆ ಕಾವೇರಿ 2.0 ಆಧಾರ್ (ಇ-ಕೆವೈಸಿ) ಮತ್ತು ಬೆಸ್ಕಾಂ ತಂತ್ರಾಂಶಗಳು ಸಂಯೋಜನೆಗೊಂಡಿದ್ದು, ಆಸ್ತಿ ಮಾಲೀಕರು ನೈಜ ದಾಖಲೆಗಳನ್ನು ನೇರವಾಗಿ ಪಡೆದುಕೊಳ್ಳಬಹುದಾಗಿದೆ. ಈ ಸಂಬಂದ ಆಸ್ತಿ ಕಣಜದಲ್ಲಿನ ಮಾಹಿತಿ ಆಧಾರದ ಮೇಲೆ ಕರಡು ಇ-ಖಾತಾವನ್ನು ಪ್ರಕಟಿಸಲಾಗಿದೆ. ಈ ಮಾಹಿತಿಗಳ ಬಗ್ಗೆ ತರಕರಾರಿದ್ದಲ್ಲಿ ಸಾರ್ವಜನಿಕರು ಇ-ಆಸ್ತಿ ತಂತ್ರಾಂಶದಲ್ಲಿ ಹೆಚ್ಚಿನ ಮಾಹಿತಿಯನ್ನು ನೇರವಾಗಿ ನಮೂದಿಸಬಹುದು. ಮಾಹಿತಿಯ ನಿಖರತೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಪರಿಶೀಲಿಸಿ, ಅನುಮೋದಿಸಲಾಗುವುದು. ಅಂತಿಮ ಇ-ಖಾತಾವನ್ನು ಮನೆಗಳಲ್ಲೇ ಕುಳಿತು ಪಡೆಯಬಹುದು.
ಸಾರ್ವಜನಿಕರು ಸರ್ಕಾರ ಅಥವಾ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರ, ಮಂಜೂರಾತಿ ಪತ್ರ ಕಂದಾಯ ಇಲಾಖೆಯಿಂದ 94ಸಿಸಿ ಅಡಿ ನೀಡಲಾದ ಹಕ್ಕುಪತ್ರಗಳು, ಸಕ್ಷಮ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ, ಮಾಲೀಕರ ಭಾವಚಿತ್ರ ಮತ್ತು ಆಧಾರ್, ಆಸ್ತಿ ತೆರಿಗೆ ಎಸ್.ಎ.ಎಸ್ ಚಲನ್ ಸಂಖ್ಯೆ, ಸ್ವತ್ತಿನ ಕ್ರಯ ಅಥವಾ ನೋಂದಾಯಿತ ಪತ್ರ ಸಂಖ್ಯೆ, ವಿದ್ಯುತ್ ಆರ್.ಸಿ.ಸಿ. ಸಂಖ್ಯೆ, ಖಾಲಿ ನಿವೇಶನಗಳಿಗೆ ವಿದ್ಯುತ್ ಆರ್.ಸಿ.ಸಿ ಅಗತ್ಯವಿಲ್ಲ, ಸ್ವತ್ತಿನ ಛಾಯಾಚಿತ್ರ, ಇ.ಸಿ.ನಮೂನೆ 15/16 ದಾಖಲೆಗಳೊಂದಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಿ ನಿಗಧಿತ ಕಾಲಾವಧಿಯೊಳಗೆ ಇ-ಖಾತಾ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 7259585959 ಅಥವಾ ವೆಬ್‍ಸೈಟ್‍ನ್ನು www.eaasthi.karnataka.gov.in ಸಂಪರ್ಕಿಸಬಹುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.








