ಬೆಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಶಾಲೆಗಳ ಶಿಕ್ಷಕರಿಗೆ ಸಿಹಿಸುದ್ದಿ ನೀಡಿದ್ದು, ಜೇಷ್ಠತಾ ಪಟ್ಟಿಗೆ ಅನುಗುಣವಾಗಿ ಖಾಲಿ ಇರುವ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ನೀಡಲು ರಾಜ್ಯಾದ್ಯಂತ ಏಕಕಾಲಕ್ಕೆ ಕೌನ್ಸಿಲಿಂಗ್ ನಡೆಸಲು ಮಹತ್ವದ ಆದೇಶ ಹೊರಡಿಸಲಾಗಿದೆ.
ಹೌದು, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವ ಪ್ರಕ್ರಿಯೆಯನ್ನು ಜನವರಿ 1ರಿಂದ ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಮುಖ್ಯ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ಬಳಿಕ ವಿವಿಧ ಹಂತದ ಪ್ರಕ್ರಿಯೆ ಪೂರ್ಣಗೊಳಿಸಿ ಕೌನ್ಸೆಲಿಂಗ್ ಮೂಲಕ ಬಡ್ತಿ ನೀಡಿ ಸ್ಥಳ ನಿಯೋಜನೆ ಮಾಡಲಾಗುವುದು.
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಪ್ರಯತ್ನದ ಫಲವಾಗಿ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕ್ರಿಯೆಗೆ ಮರು ಚಾಲನೆ ನೀಡಲು ಶಾಲಾ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಸುಮಾರು 2000ಕ್ಕೂ ಹೆಚ್ಚು ಮುಖ್ಯ ಶಿಕ್ಷಕರಿಗೆ ಬಡ್ತಿ ಭಾಗ್ಯ ಸಿಗುವ ಸಾಧ್ಯತೆ ಇದೆ. ಜ. 31ರೊಳಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ ಸರ್ಕಾರಿ ನೌಕರರ (ಜೇಷ್ಟತಾ) ನಿಯಮಗಳು-1957ರ ನಿಯಮಗಳ ಪ್ರಕಾರ 2025-26ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ (HM) ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ (SHM) ವೃಂದಕ್ಕೆ ಸ್ಥಾನಪನ್ನ ಬಡ್ತಿ ನೀಡಲು ಉದ್ದೇಶಿಸಿದೆ. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020ರ ಸೆಕ್ಷನ್ 3ರ ಪ್ರಕಾರೆ ‘ಸಿ’ ವೃಂದದ ಹುದ್ದೆಗಳಿಗೆ ಬಡ್ತಿ ನೀಡಲು ಕ್ರಮವಹಿಸಬೇಕಾಗುತ್ತದೆ.
ಪ್ರಯುಕ್ತ, ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶ್ರೇಷ್ಟತಾ ನಿಯಮಾನುಸಾರ ಆಯಾ ವೃಂದವಾರು ಪ್ರಕಟಿಸಲಾಗಿರುವ ಜಿಲ್ಲಾ ಅಂತಿಮ ಜೇಷ್ಟತಾ ಪಟ್ಟಿಗೆ ಅನುಗುಣವಾಗಿ ಬಡ್ತಿಯನ್ನು ನೀಡಬೇಕಾಗಿದ್ದು ಪ್ರಕಟಿತ ವೇಳಾಪಟ್ಟಿಯಂತೆ ಜಿಲ್ಲಾ ಹಂತದಲ್ಲಿ ಎಲ್ಲಾ ಪೂರ್ವಭಾವಿ ಕ್ರಮಗಳನ್ನು ಕೈಗೊಂಡು ಬಡ್ತಿಗೆ ಅರ್ಹರಿರುವ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಜೇಷ್ಟತಾ ಪಟ್ಟಿಯನ್ನು ದಿನಾಂಕ: 01/01/2025 ರಲ್ಲಿದ್ದಂತೆ ಅಂತಿಮಗೊಳಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ತಿಳಿಸಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಲಭ್ಯವಿರುವ ಖಾಲಿ ಹುದ್ದೆಗಳಿಗೆ ಎದುರಾಗಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಕ್ಷಮ ಪ್ರಾಧಿಕಾರಿಗಳಾದ ಆಯಾ ಜಿಲ್ಲಾ ಉಪ ನಿರ್ದೆಶಕರು(ಆಡಳಿತ)ರವರುಗಳ ಹಂತದಲ್ಲಿ ರಾಜ್ಯದಾದ್ಯಂತ ಏಕಕಾಲದಲ್ಲಿ ಕೌನ್ಸಿಲಿಂಗ್ ಮೂಲಕ ಬಡ್ತಿ ಪ್ರಕ್ರಿಯೆಗಳು ನಡೆಯುತ್ತವೆ.
ಈ ಸಂದರ್ಭದಲ್ಲಿ ಎದ್ದುಕಾಣುವ ಅಂಗವೈಕಲ್ಯವನ್ನುಳ್ಳ ವ್ಯಕ್ತಿಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಬಗ್ಗೆ ಹಾಗೂ ಅಂಗವೈಕಲ್ಯತೆಯನ್ನು ಗುರುತಿಸುವ ಕುರಿತಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಸೂಚನೆಯನ್ನು ಹೊರಡಿಸಿ ತಜ್ಞರ ಸಮಿತಿಯ ಸಭೆಯಲ್ಲಿ ಗುರುತಿಸಿರುವ ಅಂಗವೈಕಲ್ಯತೆಯ ವರ್ಗಗಳನ್ನು ನಿಗಧಿಪಡಿಸಲಾಗಿದ್ದು ಅದರಂತೆ ಕ್ರಮವಹಿಸತಕ್ಕದ್ದು. ಬಡ್ತಿ ಪ್ರಕ್ರಿಯೆಯ ಕೌನ್ಸಿಲಿಂಗ್ ಕೈಗೊಳ್ಳುವಾಗ ಈ ಕೆಳಕಂಡ ಮಾರ್ಗಸೂಚಿ ಅಂಶಗಳನ್ನು ಅನುಸರಿಸಲು ತಿಳಿಸಿದೆ.
1. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ-2020ರ ಸೆಕ್ಷನ್-3 ರಂತೆ’ಸಿ’ ವಲಯದಲ್ಲಿನ ಶಾಲೆಗಳಲ್ಲಿ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ‘ಸಿ’ ವಲಯದ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸಂಬಂಧಿಸಿದ ಶಾಲೆಗಳಲ್ಲಿ ತೆರವುಗೊಳಿಸಬೇಕಿದೆ. ಅಂದರೆ, ‘ಬಿ’ ವಲಯದಲ್ಲಿ ಕರ್ತವ್ಯ ನಿರತ ಹಿರಿಯ ಮುಖ್ಯ ಶಿಕ್ಷಕರನ್ನು ‘ಎ’ ವಲಯದ ಶಾಲೆಗಳಿಗೆ ಹಾಗೂ ‘ಸಿ’ ವಲಯದಲ್ಲಿನ ಕರ್ತವ್ಯನಿರತ ಹಿರಿಯ ಮುಖ್ಯ ಶಿಕ್ಷಕರನ್ನು ‘ಬಿ’ ವಲಯದಲ್ಲಿನ ಶಾಲೆಗೆ ಕೌನ್ಸಿಲಿಂಗ್ ಮೂಲಕ ಸ್ಥಳಾಂತರಿಸುವ ಮೂಲಕ ‘ಸಿ’ ವಲಯದಲ್ಲಿ ಖಾಲಿ ಹುದ್ದೆಗಳನ್ನು ಲಭ್ಯಪಡಿಸಬೇಕಾಗುತ್ತದೆ.
2. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ- 2020ರ ಸೆಕ್ಷನ್-10 ರ ಪ್ರಕಾರ ವಲಯ ವರ್ಗಾವಣೆಯಲ್ಲಿ ಹಿರಿಯ ಮುಖ್ಯ ಶಿಕ್ಷಕರಿಗೆ ನಿಯಮಾನುಸಾರ ಆಧ್ಯತೆಯನ್ನು ಪರಿಗಣಿಸುವುದು.









