ಚಿತ್ರದುರ್ಗ/ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕ್ರಿಸ್ ಮಸ್ ಹಬ್ಬದ ದಿನವೇ ಸರಣಿ ದುರಂತ ಸಂಭವಿಸಿದ್ದು, ಪ್ರತ್ಯೇಕ ಅಪಘಾತಗಳಲ್ಲಿ 12 ಮಂದಿ ಬಲಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದು 7 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೊರ್ಲತ್ತು ಗ್ರಾಮದ ಬಳಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 7 ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ಅತಿವೇಗದಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕನ್ನಾಲಿಗೆಗೆ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ.
ಚಿಕ್ಕಬಳ್ಳಾಂಪುರದಲ್ಲಿ ನಾಲ್ವರು ಯುವಕರು ಸಾವು
ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಅಜ್ಜವಾರ ಗ್ರಾಮದ ನರಸಿಂಹಮೂರ್ತಿ. ನಂದೀಶ್, ಅರುಣ್, ಮನೋಜ್ ಮೃತಪಟ್ಟಿದ್ದಾರೆ.
ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಈ ನಾಲ್ವರು ಚಿಕ್ಕಬಳ್ಳಾಪುರ ನಗರದ ಚರ್ಚ್ಗಳಿಗೆ ಭೇಟಿ ನೀಡಿ ಮರಳಿ ಸ್ವಗ್ರಾಮದತ್ತ ಹೊರಟಿದ್ದರು. ಮೃತ ನಾಲ್ವರು ಯುವಕರು ಒಂದೇ ಬೈಕಿನಲ್ಲಿ ಹೊರಟಿದ್ದರು. ಈ ವೇಳೆ ಟಿಪ್ಪರ್ ಲಾರಿ ಅಡ್ಡ ಬಂದಿದ್ದು ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಚಾಲಕ ಪರಾರಿಯಾಗಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.
ಮೈಸೂರಿನಲ್ಲಿ ಹೀಲಿಯಂ ಸ್ಪೋಟಕ್ಕೆ ಓರ್ವ ಸಾವು
ಮೈಸೂರು ಅರಮನೆಯ ಮುಂಭಾಗ ಹೀಲಿಯಂ ಗ್ಯಾಸ್ ಅವಘಡದಿಂದ ಓರ್ವ ಸಾವನ್ನಪ್ಪಿದ್ದಾನೆ. ಮೈಸೂರು ಅರಮನೆಯ ಮುಂಭಾಗ ಬಲೂನ್ ಗಳಿಗೆ ಹೀಲಿಯಂ ಗ್ಯಾಸ್ ತುಂಬಿಸುವಾಗ ಸ್ಪೋಟ ಸಂಭವಿಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಗಾಯಗೊಂಡ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಕೃಷ್ಣರಾಜ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








