ಚಿಕ್ಕಮಗಳೂರು: ಸರ್ಕಾರಿ ಕಾರಿಗೆ ಇಲಾಖೆಯ ಹೆಸರು ಹಾಕಿಕೊಳ್ಳುವುದು ಮಾಮೂಲಿ. ಪೊಲೀಸ್ ಆದರೇ ಪೊಲೀಸ್, ಕಂದಾಯ ಇಲಾಖೆ ಆದರೇ ಕಂದಾಯ, ಅಬಕಾರಿ ಇಲಾಖೆ ಆದರೇ ಅಬಕಾರಿ ಅಂತ ಹೀಗೆ. ಆದರೇ ಇಲ್ಲೊಬ್ಬ ಪೊಲೀಸ್ ಅಧಿಕಾರಿ ತನ್ನ ಸ್ವಂತ ಕಾರಿಗೆ ಪೊಲೀಸ್ ಅಂತ ನಾಮಫಲಕ ಹಾಕಿಕೊಂಡು ಫ್ಯಾಮಿಲಿ ಸಹಿತ ಟ್ರಿಪ್ ಗೆ ತೆರಳಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವಂತ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಇಂತಹ ಅಧಿಕಾರಿಗೆ ಕಾನೂನು ಬಿಸಿ ಮುಟ್ಟಿಸಿದಂತ ಪಿಎಸ್ಐ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಹೊಸ ವರ್ಷದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ವಾಹನಗಳನ್ನು ಬಣಕಲ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೇಣುಕಾ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಖಾಸಗಿ ವಾಹನವಾಗಿದ್ದರೂ ಪೊಲೀಸ್ ಎನ್ನುವಂತ ನಾಮಫಲಕವೊಂದನ್ನು ಹಾಕಿದ್ದು ಕಂಡು ಬಂದಿದೆ.
ಸ್ವಂತ ವಾಹನಕ್ಕೆ ಪೊಲೀಸ್ ಎಂಬುದಾಗಿ ನಾಮಫಲಕ ಹೊಂದಿದ್ದನ್ನು ಪರಿಶೀಲಿಸಿದಾಗ, ಅವರು ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬ ಸಮೇತ ಫ್ಯಾಮಿಲಿ ಟ್ರಿಪ್ ಬಂದಿರೋದು ತಿಳಿದು ಬಂದಿದೆ. ಕರ್ತವ್ಯದಲ್ಲಿ ಇಲ್ಲದೇ ಪೊಲೀಸ್ ಎಂಬುದಾಗಿ ನಾಮಫಲಕವನ್ನು ಅನಧಿಕೃತವಾಗಿ ಹಾಕಿಕೊಂಡಿದ್ದನ್ನು ಪಿಎಸ್ಐ ರೇಣುಕಾ ಪ್ರಶ್ನಿಸಿದ್ದಾರೆ.
ನಿಯಮಾನುಸಾರ ಕರ್ತವ್ಯದಲ್ಲಿ ಇಲ್ಲದಂತ ಸಂದರ್ಭದಲ್ಲಿ ಅಥವಾ ಅಧಿಕೃತ ಅನುಮತಿ ಇಲ್ಲದೇ ಪೊಲೀಸ್ ನಾಮಫಲಕ ಅಳವಡಿಸಿಕೊಂಡಿರೋದು ಕಾನೂನು ಬಾಹಿರವಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದೆ ಎಂಬುದಾಗಿ ಹೇಳುವ ಮೂಲಕ ಬಣಕಲ್ ಠಾಣೆಯ ಪಿಎಸ್ಐ ರೇಣುಕಾ ಅನಧಿಕೃತವಾಗಿ ಪೊಲೀಸ್ ಎಂಬುದಾಗಿ ತಮ್ಮ ಖಾಸಗಿ ಕಾರಿಗೆ ಅಳವಡಿಸಿದ್ದಂತ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪೊಲೀಸ್ ಅಧಿಕಾರಿಯ ವಿರುದ್ಧವೇ ಕೇಸ್ ದಾಖಲಿಸಿ, ದಂಡ ವಿಧಿಸಿದ್ದಾರೆ.
ಒಬ್ಬ ಪೊಲೀಸ್ ಅಧಿಕಾರಿಯಾಗಿ, ಮತ್ತೊಬ್ಬ ಪೊಲೀಸ್ ಅಧಿಕಾರಿ ಎಂಬುದನ್ನು ಲೆಕ್ಕಿಸದೇ ಕಾನೂನು ಬಾಹಿರವಾಗಿ, ಅನಧಿಕೃತವಾಗಿ ಪೊಲೀಸ್ ಎಂಬುದಾಗಿ ತಮ್ಮ ಸ್ವಂತ ಕಾರಿಗೆ ನಾಮಫಲಕ ಅಳವಡಿಸಿದ್ದ ಸರ್ಕಾರಿ ಅಧಿಕಾರಿಗೆ ಕಾನೂನಿನ ಅಸ್ತ್ರದ ಮೂಲಕ ಬಣಕಲ್ ಠಾಣೆಯ ಪಿಎಸ್ಐ ರೇಣುಕಾ ಬಿಸಿ ಮುಟ್ಟಿಸಿದ್ದಾರೆ. ಅವರ ಈ ಕ್ರಮದ ಬಗ್ಗೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.








