ಶಿವಮೊಗ್ಗ: ಡಿಸೆಂಬರ್.29ರಂದು ಸೊರಬದ ರಂಗ ಮಂದಿರದಲ್ಲಿ 9ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಾನಪದ ಪರಿಷತ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಡಿ.29ರಂದು ಬೆಳಿಗ್ಗೆ 8:30ಕ್ಕೆ ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದು, ಬಿಒಒ ಪುಷ್ಪಾ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಹರೀಶಿ ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿ ಕವಿತಾ ಹರೀಶಿ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿದ್ದು, ರಾಷ್ಟ್ರಮಟ್ಟದ ಪ್ರತಿನಿಧಿ ಸುಕೃತ್ ಎಸ್.ಕೆ.ಸಮ್ಮೇಳನ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಸಾವಿತ್ರೆ ಬಾಪುಲೆ ಪುರಸ್ಕೃತೆ ಅನುಷಾ ಕರಿಬಸಯ್ಯ ಹಿರೇಮಠ್, ಸಾನಿಕಾ ಟಿ.ಆರ್., ಅನುಷಾ ಭಾಗವಹಿಸಲಿದ್ದಾರೆ. ವಿಚಾರಗೋಷ್ಠಿಗೆ ಅಧ್ಯಕ್ಷರಾಗಿ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ತಪಸ್ವಿನಿ, ಕವಿಗೋಷ್ಠಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಮೂಲ್ಯಾ, ಕಥಾ ಗೋಷ್ಠಿಗೆ ಸರ್ಕಾರಿ ಹಳೇಸೊರಬ ಪ್ರೌಢಶಾಲೆಯ ಸಾನಿಧ್ಯ ಅವರ ಅಧ್ಯಕ್ಷತೆಯಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಾಚಾರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಖಲಂದರ್ ಸಾಬ್, ವಿಜಯ ದಟ್ಟೇರ್, ಡಾ.ಉಮೇಶ್ ಭದ್ರಾಪುರ ಹಾಗೂ ಕಾರ್ಯದರ್ಶಿ ಮಹೇಶ್ ಖಾರ್ವಿ ಭಾಗವಹಿಸಲಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಸೊರಬ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖಾಚಾರ್ ಮಾತನಾಡಿ, ತಾಲೂಕು ಸಾಂಸ್ಕೃತಿಕವಾಗಿ ಮಹಿಮೆಯನ್ನು ಹೊಂದಿದೆ. ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದಾನಿಗಳ ಸಹಾಯದಿಂದ ಕಾರ್ಯಕ್ರಮ ನಡೆಯುತ್ತಿವೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳನ್ನು ಕನ್ನಡ ಪರ ಚಿಂತನೆಗೆ ಹಾಗೂ ಸಾಹಿತ್ಯ ಬರೆಯಲು ಪ್ರೇರಣೆ ಆಗಲಿದೆ ಎಂದರು.
ಈ ವೇಳೆ ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಖಲಂದರ್ ಸಾಬ್, ಡಾ.ಉಮೇಶ್ ಭದ್ರಾಪುರ, ವಿಜಯಕುಮಾರ್ ದಟ್ಟೇರ್, ಉಮೇಶ್ ಖಾರ್ವಿ, ರಮೇಶ್ ಕಲ್ಲಂಬಿ, ಎಸ್.ರಾಘವೇಂದ್ರ, ಪವಿತ್ರಾ ಎ.ವಿ., ನಾಸಿರ್ ಸಾಬ್, ರಂಗನಾಥ ಮೊಗವೀರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ








