ಶಿವಮೊಗ್ಗ : ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮೂರಿನ ಆಸ್ತಿ. ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲ ಕಾಲೇಜು ಮಾತ್ರವಲ್ಲದೇ, ಸಮಾಜ ಸಹ ಮಾಡಬೇಕು ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ನೆಹರೂ ಮೈದಾನದಲ್ಲಿ ಬುಧವಾರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಸರ್ಕಾರಿ ಶಾಲಾಕಾಲೇಜು ಎಂದರೆ ಅಸಡ್ಡೆಯಿಂದ ನೋಡುವ ದಿನಗಳು ದೂರವಾಗಿದೆ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಸರ್ಕಾರಿ ಪದವಿಪೂರ್ವ ಕಾಲೇಜು ಐದು ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಅನೇಕ ಅಭಿವೃದ್ದಿ ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದ್ದು 95 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಐದು ಕೊಠಡಿ ಲೋಕಾರ್ಪಣೆ ಮಾಡಲಾಗಿದೆ. ಸುಣ್ಣಬಣ್ಣಕ್ಕೆ, ರಿಪೇರಿ, ಶೌಚಾಲಯ ನಿರ್ಮಾಣಕ್ಕೆ 50 ಲಕ್ಷ ರೂ. ಖರ್ಚು ಮಾಡಿದೆ. ರಂಗಮಂದಿರದ ಅಗತ್ಯವಿದ್ದು ಅದನ್ನು ಮುಂದಿನ ಬಜೆಟ್‌ನಲ್ಲಿ ತರಲಾಗುತ್ತದೆ ಎಂದರು.
ನೀವು ಓದಿದ ಶಾಲೆ ದೇವಾಲಯ ಇದ್ದಂತೆ. ಇದರ ಅಭಿವೃದ್ದಿಗೆ ನೀವು ಕೈಜೋಡಿಸಿ. ನಾನು ಹಳೇಯ ವಿದ್ಯಾರ್ಥಿಯಾಗಿ ಸುವರ್ಣ ಮಹೋತ್ಸವದಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಇಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಉಪನ್ಯಾಸಕ ವರ್ಗವನ್ನು ಕರೆಸಿ ಸನ್ಮಾನಿಸಿರುವುದು ನನಗೆ ಅತೀವ ಸಂತೋಷ ತಂದಿದೆ. ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯೊಂದಿಗಿನ ಒಡನಾಟ ಕಳೆದುಕೊಳ್ಳಬಾರದು ಎಂದು ಸಲಹೆ ಮಾಡಿದರು.
ಈ ಕಾರ್ಯಕ್ರಮದದಲ್ಲಿ ಪ್ರಾಚಾರ್ಯ ಸತ್ಯನಾರಾಯಣ ಕೆ.ಸಿ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎ.ಇಂದೂಧರ, ಸದಸ್ಯರಾದ ಉಮೇಶ್, ಸಲೀಂ, ಲೋಕೇಶ್, ಭವ್ಯ, ಕೃಷ್ಣಮೂರ್ತಿ ಬಿಳಿಗಲ್ಲೂರು, ಬಸವರಾಜ್ ಇನ್ನಿತರರು ಹಾಜರಿದ್ದರು. ಸಿಂಚನಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ತೀರ್ಥಪ್ಪ ಎಸ್.ಸಿ. ಸ್ವಾಗತಿಸಿದರು. ಗೇಭೂಷಣ್ ವಂದಿಸಿದರು. ವಿನಯಾ ಶೆಟ್ಟಿ ನಿರೂಪಿಸಿದರು.








