ಬೆಂಗಳೂರು : ರಾಜ್ಯದಲ್ಲಿ ಇ-ಆಸ್ತಿ ತಂತ್ರಾಂಶದಲ್ಲಿ ಹೊಸ ಸೌಲಭ್ಯಗಳನ್ನು (Features) ಕಲ್ಪಿಸಿರುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಆಸ್ತಿ ತಂತ್ರಾಂಶದ ಬಳಕೆಯನ್ನು ಉಲ್ಲೇಖ (01) ಮತ್ತು (02) ಸುತ್ತೋಲೆಗಳಲ್ಲಿ ಕಡ್ಡಾಯಗೊಳಿಸಿ ಆದೇಶಿಸಲಾಗಿರುತ್ತದೆ. ಇ-ಆಸ್ತಿ ತಂತ್ರಾಂಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಾಗೂ ಸಾರ್ವಜನಿಕರಿಗೆ ತ್ವರಿತವಾಗಿ ಸೇವಯನ್ನು ಒದಗಿಸುವ ಉದ್ದೇಶದಿಂದ ಕಾರ್ಯವಿಧಾನವನ್ನು ಸರಳೀಕರಣಗೊಳಿಸುವ ಅಗತ್ಯತೆ ಇರುವುದರಿಂದ ಇ-ಆಸ್ತಿ ತಂತ್ರಾಂಶದಲ್ಲಿ ಈ ಕೆಳಕಂಡಂತೆ ಹೊಸ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ.
1. ಕಾರ್ಯಹರಿವಿನ (workflow) ಸರಳೀಕರಣ:
ಇ-ಆಸ್ತಿ ತಂತ್ರಾಂಶದಲ್ಲಿ ಆಸ್ತಿಗಳ ದಾಖಲೀಕರಣ/ಹೊಸ ಪಿಐಡಿ ನೀಡುವುದು, ಹಕ್ಕುವರ್ಗಾವಣೆ ಮತ್ತು ಆಸ್ತಿಗಳ ವಿಭಜನೆ ಮತ್ತು ಒಟ್ಟುಗೂಡಿಸುವಿಕೆಗೆ ಸಂಬಂಧಿಸಿದಂತೆ ಪ್ರಸ್ತುತವಿರುವ ಕಾರ್ಯಹರಿವಿನಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಹಿಂದೆ ಇದ್ದ ಡಾಟ ಎಂಟ್ರಿ ಆಪರೇಟರ್ ಮತ್ತು ವಿಷಯ ನಿರ್ವಹಕರ ಲಾಗಿನ್ ಗಳನ್ನು ಸ್ಥಗಿತಗೊಳಿಸಲಾಗಿರುತ್ತದೆ. ವಿಷಯ ನಿರ್ವಹಕರನ್ನು ನಗರ ಸ್ಥಳೀಯ ಸಂಸ್ಥೆಗಳ ಇತರ ಶಾಖೆಗಳಲ್ಲಿನ ಕಾರ್ಯಗಳಿಗೆ ಮತ್ತು ಡಾಟ ಎಂಟ್ರಿ ಆಪರೇಟರ್ ಗಳನ್ನು ಹೆಲ್ಸ್ ಡೆಸ್ಕ್ ಗಳಲ್ಲಿನ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವುದು.
ಆಸ್ತಿ ದಾಖಲೆ, ವಿಭಜನೆ, ಒಟ್ಟುಗೂಡಿಸುವಿಕೆ ಹಾಗೂ ಮ್ಯುಟೇಷನ್ ಅರ್ಜಿಗಳನ್ನು ನಿರ್ವಹಿಸಲು ಕಾರ್ಯಹರಿವಿನಲ್ಲಿನ ಅಧಿಕಾರಿ/ಸಿಬ್ಬಂದಿಗಳಿಗೆ ಕಾಲಾವಧಿಯನ್ನು ನಿಗಧಿಪಡಿಸಲಾಗಿರುತ್ತದೆ. ಅಧಿಕಾರಿ/ಸಿಬ್ಬಂದಿಗಳು ನಿಗಧಿತ ಕಾಲಾವಧಿಯಲ್ಲಿ ಅರ್ಜಿಗಳನ್ನು ನಿರ್ವಹಿಸದೇ ಇದ್ದಲ್ಲಿ ಅನುಮೋದನೆ ಮಾಡುವ ಅಧಿಕಾರಿಯ ಹಂತದವರೆಗೆ ತಂತ್ರಾಂಶವು ಸ್ವಯಂಚಾಲಿತವಾಗಿ ಅರ್ಜಿಯನ್ನು ಮುಂದಿನ ಅಧಿಕಾರಿ/ನೌಕರನಿಗೆ ರವಾನೆ ಮಾಡುವುದು. ಯಾವುದೇ ನೌಕರ/ಅಧಿಕಾರಿ ಅರ್ಜಿಗಳನ್ನು ಪರಿಶೀಲಿಸಿ, ನಿರ್ವಹಿಸಲು ವಿಳಂಭ ಮಾಡಿ, ಸ್ವಯಂಚಾಲಿತವಾಗಿ ಮುಂದಿನ ಹಂತಕ್ಕೆ ರವಾನೆಯಾದಲ್ಲಿ ಅಂತಹ ನೌಕರ/ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು.








