ಲಿಬಿಯಾದ ಮಿಲಿಟರಿ ಮುಖ್ಯಸ್ಥ, ಇತರ ನಾಲ್ವರು ಅಧಿಕಾರಿಗಳು ಮತ್ತು ಮೂವರು ಸಿಬ್ಬಂದಿಯನ್ನು ಹೊತ್ತ ಖಾಸಗಿ ಜೆಟ್ ಮಂಗಳವಾರ ಟರ್ಕಿಯ ರಾಜಧಾನಿ ಅಂಕಾರಾದಿಂದ ಟೇಕಾಫ್ ಆದ ನಂತರ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
ವಿಮಾನದಲ್ಲಿನ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎಂದು ಲಿಬಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಉಭಯ ದೇಶಗಳ ನಡುವಿನ ಮಿಲಿಟರಿ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಉನ್ನತ ಮಟ್ಟದ ರಕ್ಷಣಾ ಮಾತುಕತೆಗಾಗಿ ಲಿಬಿಯಾ ನಿಯೋಗವು ಅಂಕಾರಾಗೆ ಭೇಟಿ ನೀಡಿತ್ತು ಎಂದು ಟರ್ಕಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.
ಜನರಲ್ ಮುಹಮ್ಮದ್ ಅಲಿ ಅಹ್ಮದ್ ಅಲ್-ಹದ್ದಾದ್ ಮತ್ತು ನಾಲ್ವರು ಅಧಿಕಾರಿಗಳ ಸಾವನ್ನು ದೃಢಪಡಿಸಿದ ಲಿಬಿಯಾ ಪ್ರಧಾನಿ ಅಬ್ದುಲ್-ಹಮೀದ್ ದಬೈಬಾ, ನಿಯೋಗವು ಟ್ರಿಪೋಲಿಗೆ ಮರಳುತ್ತಿದ್ದಾಗ “ದುರಂತ ಅಪಘಾತ” ಸಂಭವಿಸಿದೆ ಎಂದು ಫೇಸ್ಬುಕ್ ಪೋಸ್ಟ್ ಮೂಲಕ ಹೇಳಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಪ್ರಧಾನಿ ಇದು ಲಿಬಿಯಾಕ್ಕೆ “ದೊಡ್ಡ ನಷ್ಟ” ಎಂದು ಕರೆದರು.
ಅಲ್-ಹದ್ದಾದ್ ಪಶ್ಚಿಮ ಲಿಬಿಯಾದ ಉನ್ನತ ಮಿಲಿಟರಿ ಕಮಾಂಡರ್ ಆಗಿದ್ದರು ಮತ್ತು ಲಿಬಿಯಾದ ವಿಭಜಿತ ಮಿಲಿಟರಿಯನ್ನು ಒಂದುಗೂಡಿಸಲು ನಡೆಯುತ್ತಿರುವ, ಯುಎನ್-ಮಧ್ಯಸ್ಥಿಕೆಯ ಪ್ರಯತ್ನಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.








