ಶಿವಮೊಗ್ಗ: ಸಾಗರ ತಾಲ್ಲೂಕಿನ ಹಿರೇಬಿಲಗುಂಜಿ, ತ್ಯಾಗರ್ತಿ, ಬರೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಕೆಪಿಟಿಸಿಎಲ್ ನ ಪ್ರಮುಖ ವಿದ್ಯುತ್ ಪರಿವರ್ತಕ ದುರಸ್ಥಿಯಾಗದ ಕಾರಣ ವಿದ್ಯುತ್ ಸರಬರಾಜಿನಲ್ಲಾಗುತ್ತಿರುವ ವ್ಯತ್ಯಯ ಖಂಡಿಸಿ ಸಾಗರ ಮೆಸ್ಕಾಂ ಉಪವಿಭಾಗೀಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವಿದ್ಯುತ್ ಬಳಕೆದಾರರ ಹಿತರಕ್ಷಣಾ ಸಮಿತಿ ಸಂಚಾಲಕ ಎಸ್.ವಿ.ಹಿತಕರ ಜೈನ್ ಮಾತನಾಡಿ ಕೋಟ್ಯಾಂತರ ರೂಗಳ ಪ್ರಮುಖ ವಿದ್ಯುತ್ ಪರಿವರ್ತಕ ಕೈಕೊಟ್ಟಾಗ ತುರ್ತು ಪರ್ಯಾಯ ಪರಿವರ್ತಕ ಅಳವಡಿಸಿ ವಿದ್ಯುತ್ ವ್ಯತ್ಯಯ ಆಗದಂತೆ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಆದರೇ ಆನಂದಪುರಂ ವ್ಯಾಪ್ತಿ ಕೆಪಿಟಿಸಿಎಲ್ನ ವಿದ್ಯುತ್ ಪರಿವರ್ತಕ ದುರಸ್ಥಿಯಾಗದೇ 4 ದಿನಗಳಾದರೂ ಇದುವರೆಗೂ ದುರಸ್ಥಿಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ.ಬದಲಾಗಿ ಇನ್ನೂ 7 ದಿನಗಳು ವಿದ್ಯುತ್ ವ್ಯತ್ಯಯವಾಗುತ್ತದೆ ಎಂದು ಮೆಸ್ಕಾಂ ಇಂಜಿನಿಯರ್ಗಳು ಮೆಸೇಜ್ ರವಾನಿಸಿದ್ದಾರೆ.ದಿನಗಳು ಉರುಳುತ್ತಿದ್ದರೂ ವಿದ್ಯುತ್ ಪರಿವರ್ತಕ ದುರಸ್ಥಿಯಾಗದಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ತುರ್ತು ಸಮರ್ಪಕ ವಿದ್ಯುತ್ ಒದಗಿಸದೇ ಇದ್ದಲ್ಲಿ ಅಗತ್ಯ ಕುಡಿಯುವ ನೀರು ಸರಬರಾಜಿಗೂ ಮತ್ತು ರೈತರ ಬೆಳೆ ಉಳಿಸಿಕೊಳ್ಳಲು ಪಂಪ್ಸೆಟ್ಗಳಿಗೂ ವಿದ್ಯುತ್ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಮುಂದಿನ 24 ಗಂಟೆಯೊಳಗೆ ಪರ್ಯಾಯ ವಿದ್ಯುತ್ ಮಾರ್ಗಗಳಿಂದ ಕನಿಷ್ಟ 5-6 ತಾಸುಗಳು ತ್ರೀಪೇಸ್ ವಿದ್ಯುತ್ ಸರಬರಾಜಿಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಕುಮಾರಗೌಡ ಕೊಪ್ಪ ಮಾತನಾಡಿ ಮೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಿರೇಬಿಲಗುಂಜಿ,ತ್ಯಾಗರ್ತಿ,ಬರೂರು ಗ್ರಾಮಪಂಚಾಯಿತಿಗಳ ವ್ಯಾಪ್ತಿ ವಿದ್ಯುತ್ ಸರಬರಾಜಿನಲ್ಲಿ ತೀವ್ರ ಅಸಮರ್ಪಕವಾಗುತ್ತಿದೆ ಎಂದು ದೂರಿದರು.
ಕೆಪಿಟಿಸಿಎಲ್ನ ವಿದ್ಯುತ್ ಪರಿವರ್ತಕ ಕೈಕೊಡುತ್ತಿರುವ ಕುರಿತು ಪೂರ್ವಭಾವಿಯಾಗಿ ಗೊತ್ತಿದ್ದರೂ ಸಮರ್ಪಕ ನಿರ್ವಹಣೆಯಿಲ್ಲದೆ ತುರ್ತು ವರದಿ ಹಾಗೂ ಪರ್ಯಾಯ ಪರಿವರ್ತಕಕ್ಕೆ ಬೇಡಿಕೆ ಸಲ್ಲಿಸದೇ ರೈತರ ವಿದ್ಯುತ್ ಗ್ರಾಹಕರ ಜೊತೆ ಚಲ್ಲಾಟವಾಡುತ್ತಿರುವುದು ಸರಿಯಲ್ಲ ಎಂದು ದೂರಿದರು.
ತುರ್ತು ಕ್ರಮವಹಿಸಿ ಸಮರ್ಪಕ ವಿದ್ಯುತ್ ಸರಬರಾಜು ಮಾಡದಿದ್ದರೇ ಮುಂದಿನ ದಿನಗಳಲ್ಲಿ ಮೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ರೈತರು ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಗಣಪತಿ ತ್ಯಾಗರ್ತಿ, ಕೃಷ್ಣಮೂರ್ತಿ, ವಿ.ಜಿ.ಶ್ರೀಧರ,ಶಶಿ ಹಿರೆಬಿಲಗುಂಜಿ, ಆರೀಫ್ ತ್ಯಾಗರ್ತಿ, ಗಣಪತಿ ಅಡ್ಡೇರಿ, ಕುಮಾರ ಕಾಗೋಡುದಿಂಬ ಮೊದಲಾದವರು ಉಪಸ್ಥಿತರಿದ್ದರು.








