ಬೆಂಗಳೂರು : ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ ಹಾಗೂ ಮರಣ ಘಟನೆಗಳನ್ನು 21 ದಿನಗಳೊಳಗಾಗಿ ಕಡ್ಡಾಯವಾಗಿ ನೋಂದಣಿ ಮಾಡಿ ಉಚಿತ ಪ್ರಮಾಣ ಪತ್ರವನ್ನು ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969 (2023) ರಲ್ಲಿ ತಿದ್ದುಪಡಿ ಪ್ರಕಾರ ಜನನ ಮರಣ ನೋಂದಣಿ ಪ್ರಮಾಣ ಪತ್ರ ನೀಡಲು ಕ್ರಮವಹಿಸುವಂತೆ ಉಲ್ಲೇಖಿತ ಪತ್ರಗಳಲ್ಲಿ ಸೂಚಿಸಲಾಗಿದೆ ಅದರಂತೆ ಆಸ್ಪತ್ರೆಯಲ್ಲಿ ಆಗುವ ಜನನ & ಮರಣ ಘಟನೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿ 21 ದಿನಗಳೊಳಗಾಗಿ ಉಚಿತವಾಗಿ ಪ್ರಮಾಣ ಪತ್ರವನ್ನು ನೀಡಬೇಕಾಗಿರುತ್ತದೆ. ದಿನಾಂಕ 03/12/2025 ರಂದು ನಡೆದ ನಾಗರಿಕ ನೋಂದಣಿ ಪದ್ಧತಿಯ 32ನೇ ಅಂತರ ಇಲಾಖೆ ಸಮನ್ವಯ ಸಮಿತಿ (Inter Departmental Co Ordination committee-IDCC) ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ ಅದರಂತೆ ಈ ಅಂಶಗಳು ಕೆಳಕಂಡಂತಿರುತ್ತವೆ.
2025ನೇ ಸಾಲಿನಲ್ಲಿ ರಾಜ್ಯದಲ್ಲಿ (ದಿನಾಂಕ: 28/11/2025 ರವರೆಗೆ) ನೋಂದಣಿಯಾಗಿರುವ ಜನನ ಮತ್ತು ಮರಣ
ಘಟನೆಗಳ ಶೇಕಡವಾರು ವಿವರಗಳು ಕೆಳಗಿನಂತಿದೆ.
ಒಟ್ಟು ನೋಂದಣಿಯಾಗಿರುವ ಜನನ ಘಟನೆಗಳು 9,22,992
ಆಸ್ಪತ್ರೆಯಲ್ಲಿ ನೋಂದಣಿಯಾಗಿರುವ ಜನನ ಘಟನೆಗಳು 8,13,803
ನಿಗದಿತ ಅವಧಿಯಲ್ಲಿ 21 ದಿವಸದೊಳಗಾಗಿ ನೋಂದಣಿ ಆಗಿರುವ ಘಟನೆಗಳು ಶೇಕಡ 79.49%
22 ರಿಂದ 30 ದಿನದೊಳಗಾಗಿ ನೋಂದಣಿ ಆಗಿರುವ ಘಟನೆಗಳು ಶೇಕಡ 4%
31 ರಿಂದ 365 ದಿನದೊಳಗಾಗಿ ನೋಂದಣಿ ಆಗಿರುವ ಘಟನೆಗಳು ಶೇಕಡ 11.08%
365 ದಿನದ ನಂತರ ನೋಂದಣಿ ಆಗಿರುವ ಘಟನೆಗಳು ಶೇಕಡ 4.69%
ಒಟ್ಟು ನೋಂದಣಿಯಾಗಿರುವ ಮರಣ ಘಟನೆಗಳು 5,07,650
ನಿಗದಿತ ಅವಧಿಯಲ್ಲಿ 21 ದಿವಸದೊಳಗಾಗಿ ನೋಂದಣಿ ಆಗಿರುವ ಘಟನೆಗಳು ಶೇಕಡ 79.24%
22 ರಿಂದ 30 ದಿನದೊಳಗಾಗಿ ನೋಂದಣಿ ಆಗಿರುವ ಘಟನೆಗಳು ಶೇಕಡ 7.94%
31 ರಿಂದ 365 ದಿನದೊಳಗಾಗಿ ನೋಂದಣಿ ಆಗಿರುವ ಘಟನೆಗಳು ಶೇಕಡ 11.39%
365 ದಿನದ ನಂತರ ನೋಂದಣಿ ಆಗಿರುವ ಘಟನೆಗಳು ಶೇಕಡ 1.43%
ಮೇಲ್ಕಂಡ ನೋಂದಣಿ ಅಂಕಿ ಅಂಶಗಳ ಶೇಕಡವಾರು ಅವಲೋಕಿಸಲಾದ ಶೇಕಡ 79.49% ರಷ್ಟು ಜನನ ಮತ್ತು ಶೇಕಡ 79.24% ಮರಣಗಳು ನಿಗದಿತ ಅವಧಿ 21 ದಿನದೊಳಗಾಗಿ ನೋಂದಣಿಯಾಗಿರುತ್ತವೆ. ಮುಂದುವರೆದು, ಶೇಕಡ 4.69% ರಷ್ಟು ಜನನ ಮತ್ತು ಶೇಕಡ 1.43% ರಷ್ಟು ಮರಣ ನೋಂದಣಿಗಳು ಒಂದು ವರ್ಷದ ನಂತರ ಆಗಿರುತ್ತದೆ. ಆಸ್ಪತ್ರೆಗಳಲ್ಲಿ ಜನನ ಮರಣಗಳ ಉಪನೋಂದಣಾಧಿಕಾರಿಗಳು (Medical Officers) ನಿಗದಿತ ಅವಧಿಯಲ್ಲಿ ನೋಂದಣಿಯನ್ನು ಮಾಡದೇ ಇರುವುದರಿಂದ ಸಾರ್ವಜನಿಕರು ಮಾನ್ಯ ಘನ ನ್ಯಾಯಲಯದ ಆದೇಶವನ್ನು ಪಡೆಯಲು ಸಮಯ ಮತ್ತು ಹಣವನ್ನು ವ್ಯಯಿಸಬೇಕಾಗಿರುತ್ತದೆ. ಅಲ್ಲದೇ ನಿಗದಿತ ಸಮಯದಲ್ಲಿ ಪ್ರಮಾಣ ಪತ್ರಗಳನ್ನು ಪಡೆಯದೇ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಆದಾಗ್ಯೂ, ದಿನಾಂಕ: 03/12/2025 ರಂದು ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ರವರ ಅಧ್ಯಕ್ಷತೆಯಲ್ಲಿ ನಡೆದ ನಾಗರಿಕ ನೋಂದಣಿ ಪದ್ಧತಿಯ 32ನೇ ಅಂತರ ಇಲಾಖೆ ಸಮನ್ವಯ ಸಮಿತಿ (IDCC) ಸಭೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಶೇಕಡ 95% ರಿಂದ 98% ರವರೆಗೆ ಸಾಂಸ್ಥಿಕ ಹೆರಿಗೆ ಆಗುತ್ತಿದ್ದು ಆದರಲ್ಲಿ ಶೇ.79.49% ರಷ್ಟು ಮಾತ್ರ ನಿಗದಿತ ಸಮಯದಲ್ಲಿ ಜನನ ನೋಂದಣಿ ಆಗುತ್ತಿರುವ ಬಗ್ಗೆ, ಮತ್ತು ಆಸ್ಪತ್ರೆಗಳಲ್ಲಿ ಜನನವಾದರೂ ಸಹ ವಿಳಂಬ ನೋಂದಣಿ ಆಗುತ್ತಿರುವ ಬಗ್ಗೆ ಹಾಗೂ ಇ-ಜನ್ಮ ಪೊರ್ಟಲ್‌ನ ಜನನ ನೋಂದಣಿಯಲ್ಲಿ ಮನೆಯಲ್ಲಿ ಹೆರಿಗೆ ಆಗುತ್ತಿರುವ ಬಗ್ಗೆ ಪ್ರಸ್ತಾಪಿಸಿರುತ್ತಾರೆ.
ಆದ್ದರಿಂದ ಆಯಾ ಪ್ರದೇಶಗಳ ನೋಂದಣಾಧಿಕಾರಿಗಳು ನಿಯಮಾವಳಿ ಪ್ರಕಾರ 21 ದಿನಗಳೊಳಗಾಗಿ ಪ್ರತಿಯೊಂದು ಜನನ ಮತ್ತು ಮರಣ ಘಟನೆಗಳನ್ನು ನೊಂದಣಿ ಮಾಡಿ ಉಚಿತ ಪ್ರಮಾಣ ಪತ್ರವನ್ನು ವಿತರಿಸುವ ಬಗ್ಗೆ ಕ್ರಮಕೈಗೊಳ್ಳಬೇಕಾಗಿರುತ್ತದೆ ಆದ್ದರಿಂದ ಎಲ್ಲಾ ಆರೋಗ್ಯ ಸಂಸ್ಥೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಕೆಳಕಂಡ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
ನೋಂದಣಾಧಿಕಾರಿ(ವೈದ್ಯಾಧಿಕಾರಿ ಜವಾಬ್ದಾರಿ):
2010ರಿಂದಲೇ ಸರ್ಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳನ್ನು ಉಪನೋಂದಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಆಸ್ಪತ್ರೆಯಲ್ಲಿ ಸಂಭವಿಸುವ ಘಟನೆಗಳನ್ನು ತಡವಾಗಿ ನೋಂದಣಿ ಮಾಡಲು ಅವಕಾಶ ಇರುವುದಿಲ್ಲ.
ಎಲ್ಲಾ ಪ್ರದೇಶಗಳ ನೋಂದಣಾಧಿಕಾರಿಗಳು ನಿಯಮಾವಳಿಯ ಪ್ರಕಾರ 21 ದಿನಗಳೊಳಗಾಗಿ ಪ್ರತಿಯೊಂದು ಜನನ ಮತ್ತು ಮರಣ ಘಟನೆಗಳನ್ನು ನೋಂದಣಿ ಮಾಡಿ ಉಚಿತ ಪ್ರಮಾಣ ಪತ್ರವನ್ನು ನೀಡಬೇಕಾಗಿರುತ್ತದೆ. ಆದ ಕಾರಣ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನಗಳನ್ನು ನೋಂದಣಿ ಮಾಡಿ ಆಸ್ಪತ್ರೆಯಿಂದ ಬಿಡುಗಡೆ (Discharge) ಮಾಡುವ ಸಂದರ್ಭದಲ್ಲಿಯೇ ಉಚಿತವಾಗಿ ಪ್ರಮಾಣ ಪತ್ರವನ್ನು ನೀಡುವ ಬಗ್ಗೆ ಕ್ರಮ ವಹಿಸುವುದು.
ಇ-ಜನ್ಮ ಪೊರ್ಟಲ್‌ನಲ್ಲಿ ಜನನ ನೋಂದಣಿಯಲ್ಲಿ ಮನೆಯಲ್ಲಿ ಹೆರಿಗೆಯಾಗುತ್ತಿರುವುದಾಗಿ ದಾಖಲಾಗಿದ್ದು, ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸುವುದು.
ನಿಗದಿತ ಅವಧಿಯಲ್ಲಿ ನೋಂದಣಿ ಮಾಡದಿದ್ದರೆ ಸಂಬಂಧಿಸಿದ ವೈದ್ಯಾಧಿಕಾರಿಗಳೇ ಹೊಣೆಗಾರರು ಎಂದು ಸ್ಪಷ್ಟ ನಿರ್ದೇಶನ ನೀಡಬೇಕು.
1. ಆಶಾ ಕಾರ್ಯಕರ್ತರ ಜವಾಬ್ದಾರಿ:
ಆಶಾ ಕಾರ್ಯಕರ್ತರನ್ನು ಜನನ-ಮರಣ ಮಾಹಿತಿದಾರರನ್ನಾಗಿ ನೇಮಕ ಮಾಡಲಾಗಿದೆ.
ತಮ್ಮ ವ್ಯಾಪ್ತಿಯ ಮನೆಗಳಲ್ಲಿ ಸಂಭವಿಸುವ ಜನನ ಘಟನೆಗಳ ಕುರಿತು ಸ್ಥಳ ಪರಿಶೀಲನೆ ಮಾಡಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವುದು.
ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಮೊದಲು ಘಟನೆಗಳ ನೋಂದಣಿ ಮಾಡಲು ಹಾಗೂ ಜನನ ಪ್ರಮಾಣ ಪತ್ರ ಪಡೆಯಲು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಸುವುದು ಇವರ ಜವಾಬ್ದಾರಿಯಾಗಿದೆ.
ಎಲ್ಲಾ ಆಸ್ಪತ್ರೆಗಳು ಶೇಕಡಾ 100% ಸಮಯೋಚಿತ ನೋಂದಣಿ ಮಾಡುವಂತೆ ಸೂಚಿಸಲಾಗಿದೆ.
2. ಶುಲ್ಕಜಮೆ:
ನಿಗದಿತ ಸಮಯ ಮೀರಿ ನೋಂದಣಿ ಶುಲ್ಕ ಅನ್ವಯವಾದಲ್ಲಿ ಅದನ್ನು ಲೆಕ್ಕಶೀರ್ಷಿಕೆ 1475-00-012-1-02 ಗೆ ನಿಗದಿತ
ಸಮಯದೊಳಗೆ ಜಮೆ ಮಾಡಬೇಕು.
ಇ-ಜನ್ಮ ತಂತ್ರಾಂಶದಲ್ಲಿ ವಿಳಂಬವಾಗಿ ಜನನ ಮತ್ತು ಮರಣ ನೋಂದಣಿ ಮಾಡುತ್ತಿರುವ ಆಸ್ಪತ್ರೆಗಳ ಪಟ್ಟಿಯನ್ನು ಈ ಪತ್ರದೊಂದಿಗೆ ಲಗತ್ತಿಸಲಾಗಿದೆ ಹಾಗೂ ಸೂಕ್ತ ಕ್ರಮಕೈಗೊಳ್ಳಲು ತಿಳಿಸಿದೆ.
ಜನನ ಮರಣ ಘಟನೆಗಳ ಶೇಕಡಾ 100% ರಷ್ಟು ನೋಂದಣಿಯನ್ನು ಮಾಡಲು ಹಾಗೂ ವಿಳಂಬ ನೋಂದಣಿಗೆ ಅವಕಾಶ ನೀಡದಂತೆ ಕ್ರಮಕೈಗೊಳ್ಳಲು, ನಿಗದಿತ ಅವಧಿಯೊಳಗೆ ಜನನ ಮರಣ ಪ್ರಮಾಣ ಪತ್ರಗಳನ್ನು ಪಡೆಯುವಂತೆ ಹಾಗೂ ಮನೆಯಲ್ಲಿ ಘಟಿಸುವ ಹೆರಿಗೆಗೆ ಅವಕಾಶ ನೀಡದೆ ಸಾಂಸ್ಥಿಕ ಹೆರಿಗೆ ಮಾಡಿಸಿಕೊಳ್ಳುವಂತೆ ಜನರಲ್ಲಿ ಅರಿವು ಮೂಡಿಸಲು ಕಟ್ಟುನಿಟ್ಟಾಗಿ ಕ್ರಮಗಳನ್ನು ಪಾಲಿಸುವಂತೆ ಎಲ್ಲಾ ಆರೋಗ್ಯ ಸಂಸ್ಥೆಗಳಿಗೆ ನಿರ್ದೇಶಿಸುವಂತೆ ಸೂಚಿಸಿದೆ.









